ವಿದ್ಯಾರ್ಥಿಗಳಿಗೆ ಹೆಬ್ಬುಲಿ ಹೇರ ಸ್ಟೈಲ್ ಮಾಡಬೇಡಿ

20230722_200548
ಕುಲಹಳ್ಳಿ ಗ್ರಾಮದ ಪ್ರೌಢಶಾಲೆಯ ವಿದ್ಯಾರ್ಥಿಗಳ ಹೆಬ್ಬುಲಿ ಹೇರ ಸ್ಟೈಲ್
Published on

ಬಾಗಲಕೋಟೆ: ನಮ್ಮ ಶಾಲೆಯ ವಿದ್ಯಾರ್ಥಿಗಳು ಹೆಬ್ಬುಲಿ ಸೇರಿ ಇತರೆ ಹೇರ ಸ್ಟೈಲ್ ಮಾಡಿಸಿಕೊಂಡು ಬರುತ್ತಿದ್ದು, ಕಲಿಕೆಗೆ ಆಸಕ್ತಿಗೆ ತೋರಿಸುತ್ತಿಲ್ಲ. ಇನ್ಮುಂದೆ ಈ ರೀತಿ ಕಟಿಂಗ ಮಾಡುವಂತೆ ಒತ್ತಾಯಿಸಿದರೆ ಅಂತವರ ಬಗ್ಗೆ ನಮಗೆ ಮಾಹಿತಿ ನೀಡಿ. ಹೆಬ್ಬುಲಿ ಹೇರ್ ಕಟಿಂಗ್ ಮಾಡಬೇಡಿ.

ಹೀಗೆಂದು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರೊಬ್ಬರು ಸಲೂನ್ ಅಂಗಡಿ ಮಾಲೀಕರಿಗೆ ಪತ್ರ ಬರೆದಿರುವ ಅಪರೂಪದ ಪ್ರಕರಣವೊಂದು ಜಿಲ್ಲೆಯ ಕುಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ರಾಜ್ಯದಲ್ಲಿ ಇಂಥಹದು ಘಟನೆ ನಡೆದಿರುವುದು ಇದೇ ಮೊದಲು ಎನ್ನಲಾಗುತ್ತಿದೆ. ವಿದ್ಯಾರ್ಥಿಗಳ ಚಿತ್ರ ವಿಚಿತ್ರ ಹೇರ ಸ್ಟೈಲ್ ನೋಡಿ ನೋಡಿ ಬೇಸತ್ತಿರುವ ಶಿಕ್ಷಕರು, ಶಾಲಾ ಆಡಳಿತ ಮಂಡಳಿಯವರು ಸೇರಿ ಈ ರೀತಿಯ ತೀರ್ಮಾನಕ್ಕೆ ಬಂದಿದ್ದಲ್ಲದೇ ಸಲೂನ ಮಾಲೀಕರಿಗೆ ಪತ್ರವನ್ನು ಸಹ ಬರೆದಿದ್ದಾರೆ.

ಚಲನ ಚಿತ್ರ ನಟರು, ಕ್ರಿಕೆಟಿಗರು ಸೇರಿದಂತೆ ಸೆಲೆಬ್ರಿಟಿಗಳು ಕೆಲವೊಮ್ಮೆ ವಿಶಿಷ್ಟ ರೀತಿಯಲ್ಲಿ ತಮ್ಮ ಹೇರ ಸ್ಟೈಲ್ ಬದಲಿಸಿಕೊಳ್ಳುತ್ತಿರುತ್ತಾರೆ. ಅವರನ್ನು ಆರಾಽಸುವ ಅನೇಕ ಬೆಂಬಲಿಗರು ಸಹ ಅದೇ ತೆರನಾಗಿ ಹೇರ ಕಟಿಂಗ ಮಾಡಿಸುವುದು ಇತ್ತೀಚಿಗೆ ತುಸು ಜಾಸ್ತಿಯಾಗಿಯೇ ನಡೆದುಕೊಂಡು ಬರುತ್ತಿದೆ. ಇದು ಸಾಮಾಜಿಕ ಜಾಲತಾಣಗಳಲ್ಲೂ ಸಹ ಹೆಚ್ಚು ಸದ್ದು ಮಾಡುತ್ತಿರುತ್ತವೆ.

ಹಾಗೆಯೇ ಕುಲಹಳ್ಳಿ ಹೈಸ್ಕೂಲನ ಈ ವಿದ್ಯಾರ್ಥಿಗಳು ಹೆಬ್ಬುಲಿ ಚಿತ್ರದಲ್ಲಿ ನಾಯಕ ಸುದೀಪ ಅವರ ಹೇರ ಕಟಿಂಗ (ತಲೆಯ ಒಂದು ಬದಿಗೆ ಉದ್ದನೆಯ ಕೂದಲು ಬಿಟ್ಟು ಮತ್ತೊಂದು ಬದಿಗೆ ಸಣ್ಣಗೆ ಮಾಡಿಸಿಕೊಳ್ಳುವುದು) ಅನುಸರಿಸುತ್ತಿದ್ದಾರಂತೆ. ಈ ಬಗ್ಗೆ ಹೇಳಿದರೂ ವಿದ್ಯಾರ್ಥಿಗಳು ಈ ಗೀಳಿನಿಂದ ಹೊರಬಂದಿಲ್ಲವಂತೆ. ಅಲ್ಲದೇ ಈ ರೀತಿಯ ಗೀಳಿಗೆ ಅಂಟಿಕೊಂಡು ಕಲಿಕೆ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಕಡೆಗೆ ಆಸಕ್ತಿ ಕಡಿಮೆ ಮಾಡಿದ್ದರಂತೆ. ಹೀಗೆ ಚಿತ್ರ ವಿಚಿತ್ರ ಹೇರ ಸ್ಟೈಲ್ ಮಾಡಿಕೊಂಡು ಬರುವುದು ಸಹ ಶಾಲಾ ವಿದ್ಯಾರ್ಥಿಗಳಿಗೆ ಒಪ್ಪುವಂತದ್ದು ಸಹ ಅಲ್ಲ.


ಹೀಗಾಗಿ ಶಾಲಾ ಆಡಳಿತ ಮಂಡಳಿ ಸದಸ್ಯರು ಹಾಗೂ ಶಿಕ್ಷಕರು ಸೇರಿಕೊಂಡು ಹೆಬ್ಬುಲಿ ಹೇರ ಸ್ಟೈಲ್ ಗೆ ಕಡಿವಾಣ ಹಾಕಲು ಅಂತಿಮವಾಗಿ ಸಲೂನ್ ಮಾಲೀಕರಿಗೆ ಮೊರೆ ಹೋಗಿದ್ದಾರೆ. ಗ್ರಾಮದಲ್ಲಿ ಇರುವ ಸೆಲೂನ ಅಂಗಡಿ ಮಾಲೀಕರಿಗೆ ಎರಡು ದಿನಗಳ ಹಿಂದೆ ಹೈಸ್ಕೂಲ್ ಮುಖ್ಯ ಶಿಕ್ಷಕ ಶಿವಾಜಿ ನಾಯಕ ಎನ್ನುವವರು ಪತ್ರವೊಂದನ್ನು ಬರೆದು, ಹೆಬ್ಬುಲಿ ಹೇರ ಕಟಿಂಗ ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net