ವಿದ್ಯಾರ್ಥಿಗಳಿಗೆ ಚುಟುಕು ಸಾಹಿತ್ಯ ಅರಿವು ಅಗತ್ಯ

16blrp3
Published on

ಬೇಲೂರು: ವಿದ್ಯಾರ್ಥಿಗಳಿಗೆ ಚುಟುಕು ಸಾಹಿತ್ಯದ ಬಗ್ಗೆ ತಿಳಿವಳಿಕೆ, ಆಸಕ್ತಿ ಬೆಳೆಸಲು ವಿವಿಧ ಶಾಲೆಗಳಲ್ಲಿ ಚುಟುಕು ಕವಿಗೋಷ್ಠಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕಿರಣ್ ಕುಮಾರ್ ಹೇಳಿದರು.

ತಾಲೂಕು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಅ.31ರಂದು ಬೇಲೂರು ಪಟ್ಟಣದ ಹೊಯ್ಸಳ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿರುವ ಚುಟುಕು ಕೌಸ್ತುಭ ರಾಜ್ಯ ಪ್ರಶಸ್ತಿ ಪ್ರದಾನ ಹಾಗೂ ಕವಿಗೋಷ್ಠಿ ಕಾರ್ಯಕ್ರಮದ ಅಂಗವಾಗಿ ಗುರುವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿ ಜೀವನದಿಂದಲೇ ಮಕ್ಕಳು ಸಾಹಿತ್ಯದ ಬಗ್ಗೆ ಆಸಕ್ತಿ ವಹಿಸಿದರೆ ಮುಂದಿನ ದಿನಗಳಲ್ಲಿ ಉತ್ತಮ ಸಾಹಿತಿಯಾಗಲು ಸಾಧ್ಯ. ಸಾಹಿತ್ಯವನ್ನು ಪ್ರವೃತ್ತಿಯಾಗಿ ಬೆಳೆಸಿಕೊಳ್ಳುವ ಮೂಲಕ ಆ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು ಎಂದರು.

ಪಟ್ಟಣದ ಹೊಯ್ಸಳ ಪದವಿ ಪೂರ್ವ ಕಾಲೇಜಿನಲ್ಲಿ 150ಕ್ಕೂ ಹೆಚ್ಚು ಮಕ್ಕಳಿದ್ದು ಅವರಿಗೆ ಚುಟುಕು ಸಾಹಿತ್ಯದ ಬಗ್ಗೆ ಅರಿವು ಮೂಡಿಸಿ ಕನಿಷ್ಠ 30 ಮಕ್ಕಳಾದರೂ ಸಾಹಿತ್ಯ ಪ್ರೇಮ ಬೆಳೆಸಿಕೊಳ್ಳುವಂತೆ ಮಾಡಿದರೆ ನಮ್ಮ ಶ್ರಮ ಸಾರ್ಥಕವಾಗುತ್ತದೆ ಎಂಬ ಉದ್ದೇಶದಿಂದ ‘ಚುಟುಕು ಒಲವು-ಬದುಕಿಗೆ ಚೆಲುವು’ ಶೀರ್ಷಿಕೆಯಡಿ ಚುಟುಕು ಕೌಸ್ತುಭ ರಾಜ್ಯ ಪ್ರಶಸ್ತಿ ಪ್ರದಾನ ಹಾಗೂ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಚುಟುಕು ಸಾಹಿತ್ಯ ಪರಿಷತ್ ಉಪಾಧ್ಯಕ್ಷ ದೇವರಾಜ್, ಪ್ರಧಾನ ಕಾರ್ಯದರ್ಶಿ ಚಂದ್ರಕಿರಣ್ ಗುಜರ್, ನಿರ್ದೇಶಕ ನಂಜುಂಡಯ್ಯ, ಮಾಧ್ಯಮ ಸಲಹೆಗಾರ ರಾಘವೇಂದ್ರ ಹೊಳ್ಳ ಇದ್ದರು.

--------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net