ವಿದ್ಯಾರ್ಥಿಗಳಿಗೆ ಚಿಕ್ಕಬೆಟ್ಟ ಚಂದ್ರಗಿರಿ ಶೈಕ್ಷಣಿಕ ದರ್ಶನ

IMG_20230901_113441
ಶ್ರವಣಬೆಳಗೊಳದ ಚಂದ್ರಗಿರಿ ಚಿಕ್ಕಬೆಟ್ಟ ಶೈಕ್ಷಣಿಕ ದರ್ಶನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಡಾ. ಎಸ್.ದಿನೇಶ್ ಉಪನ್ಯಾಸ ನೀಡಿದರು.
Published on

ಶ್ರವಣಬೆಳಗೊಳ: ದೇಶ, ವಿದೇಶಗಳಿಂದ ಶ್ರವಣಬೆಳಗೊಳದ ಇತಿಹಾಸ ಹಾಗೂ ಧಾರ್ಮಿಕ ಬಗ್ಗೆ ಅಧ್ಯಯನ ಮಾಡಲು ಬರುತ್ತಾರೆ. ಆದರೆ ಸ್ಥಳೀಯರಿಗೆ ಇಲ್ಲಿನ ಇತಿಹಾಸ, ವಾಸ್ತುಶಿಲ್ಪ, ಶಿಲಾ ಶಾಸನಗಳ ಬಗ್ಗೆ ಅರಿವು ಇಲ್ಲದಿರುವುದು ಬೇಸರದ ಸಂಗತಿ ಎಂದು ಉಪನ್ಯಾಸಕ ಡಾ.ಎಸ್.ದಿನೇಶ್ ಹೇಳಿದರು.

ಎಸ್.ಎನ್.ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಭಾನುವಾರ ಆಯೋಜಿಸಿದ್ದ ಚಂದ್ರಗಿರಿ ಚಿಕ್ಕಬೆಟ್ಟ ಶೈಕ್ಷಣಿಕ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ಥಳೀಯವಾಗಿರುವ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯನ್ನು ಯುವ ಜನತೆಗೆ ತಲುಪಿಸುವ ಕೆಲಸವಾಗಬೇಕು. ನಮ್ಮ ಸುತ್ತಮುತ್ತ ಅನೇಕ ಐತಿಹ್ಯಗಳು ಅಡಗಿವೆ. ಆದರೆ ನಮಗೆ ಅರಿವಿಲ್ಲದೆ ಅದರ ಮೇಲೆ ಬೆಳಕು ಚೆಲ್ಲಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಈ ಬಗ್ಗೆ ಹೆಚ್ಚಿನ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರಬೇಕು. ಆಗ ನಮ್ಮ ಪ್ರಾಚೀನ ಸಂಸ್ಕೃತಿಯ ರಕ್ಷಣೆ ಜತೆಗೆ ಇತಿಹಾಸದ ಅರಿವು ಮೂಡುತ್ತದೆ ಎಂದರು.

ಶ್ರವಣಬೆಳಗೊಳದ ಚಂದ್ರಗಿರಿ ಬೆಟ್ಟವು ಕೇವಲ ಜೈನ ಧರ್ಮದ ಧಾರ್ಮಿಕ ಕೇಂದ್ರವಾಗದೆ, ಪ್ರಾಚೀನ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಮಹತ್ವದ ವಿಷಯಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ಭೂಮಟ್ಟದಿಂದ 200 ಅಡಿ ಎತ್ತರ ಹಾಗೂ ಸಮುದ್ರ ಮಟ್ಟದಿಂದ ಸುಮಾರು 3049 ಅಡಿ ಎತ್ತರವಿರುವ ಈ ಬೆಟ್ಟದಲ್ಲಿ ಕ್ರಿ.ಪೂ. 3ನೇ ಶತಮಾನದಿಂದ ಇಲ್ಲಿಯವರೆಗಿನ ಇತಿಹಾಸವನ್ನು ಕಾಣಬಹುದಾಗಿದೆ. ಇಲ್ಲಿ ಸುಮಾರು 271ಕ್ಕೂ ಹೆಚ್ಚು ಶಿಲಾ ಶಾಸನಗಳಿದ್ದು, ಇನ್ನೂ ಹಲವಾರು ಅಪ್ರಕಟಿತ ಶಾಸನಗಳು ಇಲ್ಲಿವೆ. ಅದರ ಶೋಧನೆಯ ಕೆಲಸ ಅಗತ್ಯವಾಗಿ ಆಗಬೇಕಾಗಿದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಬೇಕು ಎಂದರು.

ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಶ್ರವಣಬೆಳಗೊಳದ ಇತಿಹಾಸವನ್ನು ಚಂದ್ರಗಿರಿ ಚಿಕ್ಕಬೆಟ್ಟ ದರ್ಶನ, ವಿಂಧ್ಯಗಿರಿ ದೊಡ್ಡಬೆಟ್ಟ ದರ್ಶನ ಹಾಗೂ ಬಸದಿಗಳ ದರ್ಶನ ಎಂದು 3 ಹಂತದಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.

ಎಸ್.ಎನ್. ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ವೀಣಾ, ನೌಕರ ಶಂಕರ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net