

ಹುಣಸೂರು: ಓದುವ ಹವ್ಯಾಸದಿಂದ ಜ್ಞಾನವೆನ್ನುವ ಅದಮ್ಯ ಶಕ್ತಿಯನ್ನು ಗಳಿಸಬಹುದಾಗಿದ್ದು ವಿದ್ಯಾರ್ಥಿಗಳು ನಿರಂತರ ಅಧ್ಯಯನ ಪ್ರವೃತ್ತರಾಗಬೇಕು ಎಂದು ನಗರಸಭೆ ಪೌರಾಯುಕ್ತೆ ಕೆ.ಮಾನಸಾ ತಿಳಿಸಿದರು.
ನಗರದ ಗ್ರಂಥಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಓದುವುದು ಹವ್ಯಾಸ ಆಗಬೇಕು. ಜ್ಞಾನ ಎಂಬುದು ಕೆಲಸಕ್ಕೆ ಸೀಮಿತವಾಗಬಾರದು. ಓದು ಹರಿಯುವ ನೀರಿನಂತೆ ನಿರಂತರವಾಗಿರಬೇಕು. ನಿಮ್ಮ ಆಸಕ್ತಿಯ ಪ್ರವೃತ್ತಿಯಾಗಿರಬೇಕು. ಇಷ್ಟ ಪಟ್ಟು ಓದಬೇಕು. ನನ್ನ ಸಾಧನೆಗೆ ಗ್ರಂಥಾಲಯವೇ ದಾರಿ ದೀಪವಾಗಿತ್ತು. ವಿದ್ಯಾರ್ಥಿಗಳು ಗ್ರಂಥಾಲಯವನ್ನು ಆಲಯವಾಗಿಸಿಕೊಳ್ಳಿ ಎಂದ ಅವರು, ಗ್ರಂಥಾಲಯಕ್ಕೆ 10 ಸಾವಿರ ರೂ.ವೈಯಕ್ತಿವಾಗಿ ನೀಡುತ್ತಿದ್ದು ನಗರಸಭೆಯ ಗ್ರಂಥಾಲಯ ನಿಧಿಯಿಂದ ಅಗತ್ಯ ನೆರವು ನೀಡುವುದಾಗಿ ತಿಳಿಸಿದರು.
ಮಹಿಳಾ ಕಾಲೇಜಿನ ಗ್ರಂಥಾಲಯ ವಿಭಾಗದ ಮುಖ್ಯಸ್ಥ ಕರುಣಾಕರ್ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗಿರುವ ಹಾಗೂ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಜ್ಞಾನದ ಗಣಿಯನ್ನು ಪೂರೈಸುವ ಗ್ರಂಥಾಲಯದ ಸದ್ಬಳಕೆ ಎಲ್ಲರಿಂದಾಗಬೇಕೆಂದರು.
ಕಸಾಪ ಅಧ್ಯಕ್ಷ ಮಹದೇವ್ ಮಾತನಾಡಿ, ಗ್ರಂಥಾಲಯಗಳು ದೇವಾಲಯಗಳಿದ್ದಂತೆ. ಇತ್ತೀಚೆಗೆ ಮೊಬೈಲ್ ಆಕರ್ಷಣೆಗೆ ಓದಿನಿಂದ ದೂರವಾಗುತ್ತಿರುವುದು ಆತಂಕಕಾರಿಯಾಗಿದೆ. ಇದರಿಂದ ಜ್ಞಾನದ ಬೆಳಕಿನ ಮೇಲೆ ಪರಿಣಾಮ ಬೀರುತ್ತಿದ್ದು, ಓದನ್ನೇ ಪ್ರವೃತ್ತಿಯಾಗಿಸಿಕೊಳ್ಳುವುದು, ಗ್ರಂಥಾಲಯವನ್ನು ಬಲಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ರಂಗಕಲಾವಿದ ಎಸ್.ಜಯರಾಮ್ ಗ್ರಂಥಾಲಯದ ಮಹತ್ವ ತಿಳಿಸಿದರು. ಗ್ರಂಥಪಾಲಕ ಸತೀಶ್ ಸಪ್ತಾಹದ ಮಾಹಿತಿ ನೀಡಿದರು. ರೋಟರಿ ವಿದ್ಯಾಸಂಸ್ಥೆಯ ಅಕ್ಮಲ್‌ಅಹಮದ್, ಗ್ರಾಮ ಪಂಚಾಯಿತಿ ಮೇಲ್ವಿಚಾರಕರ ಸಂಘದ ಅಧ್ಯಕ್ಷ ರಮೇಶ್, ಮೇಲ್ವಿಚಾರಕರಾದ ಭೈರಪ್ಪಗೌಡ, ಯೋಗಶ್ರೀ, ಸೋಮಶೇಖರ್, ಭಾಮಿನಿ, ಸವಿತಾ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸ್ಪರ್ಧಾ ವಿಜೇತರು: ಸಪ್ತಾಹದ ಅಂಗವಾಗಿ ನಡೆದ ಜಾನಪದ ಗೀತೆ ಸ್ಪರ್ಧೆಯಲ್ಲಿ ದೀಪ್ತಿ(ಪ್ರಥಮ ಸ್ಥಾನ), ಜಿಎಚ್‌ಪಿಎಸ್ ಶಾಲೆ, ನಂದಿತಾ(ದ್ವಿತೀಯ), ಬಾಲಕಿಯರ ಪ್ರೌಢಶಾಲೆ, ಆರ್.ಚಿದ್ಭವಿ(ತೃತೀಯ), ಆರ್.ಜೆ.ಲಾವಣ್ಯ(ನಾಲ್ಕನೆಯ) ಜಿಜೆಜಿಸಿ. ಭಾವಗೀತೆ ಸ್ಪರ್ಧೆಯಲ್ಲಿ ಎನ್.ಅದಿತಿ(ಪ್ರಥಮ)ರೋಟರಿಶಾಲೆ, ಪೂಜಾ (ದ್ವಿ) ಜಿಜೆಜಿಸಿ, ಟಿ.ವಿ.ಬಿಂದು(ತೃ) ರೋಟರಿ ಶಾಲೆ, ಆರ್.ಗಜಲಕ್ಷ್ಮೀ (ನಾಲ್ಕನೆಯ)ಜಿಎಚ್‌ಪಿಎಸ್ ಶಾಲೆ.