ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಮೂಡಿಸಿ

bkt-20-5
Published on

ಬಾಗಲಕೋಟೆ: ನಕಲು ರಹಿತವಾಗಿ ಪರೀಕ್ಷೆ ಬರೆಯಲು ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಮೂಡಿಸುವಂತೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶೀಧರ ಕುರೇರ ತಿಳಿಸಿದರು.

ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಹಾಗೂ ಶಾಲಾ ಉಸ್ತುವಾರಿ ಅಧಿಕಾರಿಗಳ ಜೊತೆಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ನೂರಕ್ಕೆ ನೂರರಷ್ಟು ಆಗಬೇಕು. ಪರೀಕ್ಷೆ ನಕಲು ಮುಕ್ತವಾಗಿ ನಡೆಸಬೇಕು. ಫಲಿತಾಂಶ ಹೆಚ್ಚಿಸಲು ವಾಮಮಾರ್ಗ ಕಂಡುಕೊಳ್ಳುವಂತಿಲ್ಲ. ಅಂತಹ ಪ್ರಕರಣ ಕಂಡುಬಂದಲ್ಲಿ ನಿರ್ದಾಕ್ಷಣ್ಯವಾಗಿ ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಿದರು.

ಈ ವರ್ಷ ಗುಣಾತ್ಮಕ ಶಿಕ್ಷಣ ನೀಡಬೇಕು. ಶಿಕ್ಷಕರು ಪ್ರಮಾಣಿಕವಾಗಿ ತಮ್ಮ ವೃತ್ತಿಯನ್ನು ಮಾಡಬೇಕು. ಮುಖ್ಯೋಪಾದ್ಯಾಯರು ಅವರ ಕಾರ್ಯವನ್ನು ಗಮನಿಸುವದರ ಜೊತೆಗೆ ಮಕ್ಕಳ ಕಲಿಕೆ ಕುರಿತು ವಿಶ್ಲೇಷಣೆ ಮಾಡಲು ತಿಳಿಸಿದರು. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದಾಗಿದ್ದು, ನಮ್ಮ ಚಿತ್ತ ಶತಕದತ್ತ ಎಂಬ ಧ್ಯೇಯ ವಾಕ್ಯವಾಗಿರಬೇಕು. ಕಾರಣವಿಲ್ಲದೇ ಶಿಕ್ಷಕರು ರಜೆ ಹಾಕುವುದು ಕಂಡುಬಂದಿದ್ದು, ಅನಿವಾರ್ಯತೆ, ಸಕಾರಣ ಇಲ್ಲದೇ ರಜೆ ಮಂಜೂರು ಮಾಡಬಾರದೆಂದು ಕುರೇರ ಸೂಚಿಸಿದರು.

ಎಸ್.ಎಸ್.ಎಲ್.ಸಿ ಉತ್ತಮ ಫಲಿತಾಂಶಕ್ಕಾಗಿ ಶಾಲಾ ಉಸ್ತುವಾರಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಮಕ್ಕಳಿಗೆ ಡಿಸೆಂಬರ ಮಾಹೆಯಿಂದಲೇ ಪುನರಾವರ್ತನೆ ಮಾಡಿ ಗುಂಪು ಸಮಾಲೋಚನೆ ಮಾಡಲು ತಿಳಿಸಿದರು. ಪ್ರತಿ 15 ದಿನಗಳಲ್ಲಿ ಎರಡು ಶಾಲೆಗಳಿಗೆ ಭೇಟಿ ನೀಡಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಹ ಸಮಯ ದೊರೆತಾಗ ಶಾಲಾ ಭೇಟಿ ಮಾಡಿ, ಪಾಲಕರ ಸಭೆ, ಮೂಲಭೂತ ಸೌಕರ್ಯ ಮೇಲ್ವಿಚಾರಣೆ ಮಾಡಬೇಕು ಎಂದರು.

ಶಾಲಾ ವ್ಯವಸ್ಥೆ, ಕೈತೋಟ ಹಾಗೂ ಶೈಕ್ಷಣಿಕವಾಗಿ ಯಾವ ಶಕ್ತಿ ಮೀರಿ ಕೆಲಸ ಮಾಡುತ್ತಾರೆ ಅಂತವರಿಗೆ ಪ್ರಶಂಸೆ ನೀಡಲಾಗುತ್ತದೆ. ಅಲ್ಲದೇ ಜಿಲ್ಲೆಗೆ 3 ಜನ ಮುಖ್ಯ ಶಿಕ್ಷಕರಿಗೆ ವೈಯಕ್ತಿಕವಾಗಿ ಬಹುಮಾನದೊಂದಿಗೆ ಸನ್ಮಾನ ಸಹ ಮಾಡಲಾಗುತ್ತದೆ ಎಂದ ಅವರು ಕೆಲಸದಲ್ಲಿ ನಿರ್ಲಕ್ಷ ತೋರಿದವರಿಗೆ ಶಿಸ್ತುಕ್ರಮಕ್ಕೆ ಒಲಪಡಿಸಲಾಗುತ್ತದೆ ಎಂದರು. ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲು ತಿಳಿಸಿದರು.
ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಾಸ್ಮೀನ್ ಕಿಲ್ಲೆದಾರ, ಎನ್.ವಾಯ್.ಕುಂದರಗಿ, ಎಂ.ಎಸ್.ಬಡದಾನಿ, ಆರ್.ಎಸ್.ಆದಾಪೂರ, ಎ.ಕೆ.ಬಸಣ್ಣವರ, ಎಸ್.ಎಂ.ಮುಲ್ಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net