ವಿದ್ಯಾರ್ಥಿಗಳ ತೇರ್ಗಡೆಗೆ ಶಿಕ್ಷಕರ ಪರಿಶ್ರಮವೇ ಕಾರಣ

IMG_20250515_145602
Published on

ಗಂಡಸಿ: ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳು ತೇರ್ಗಡೆಯಾಗಲು ಶಿಕ್ಷಕರ ಪರಿಶ್ರಮವೇ ಕಾರಣ ಎಂದು ಎಜುಕೇಷನ್ ಸೇವಾ ಟ್ರಸ್ಟ್ ಸಂಸ್ಥಾಪಕ ಡಾ.ಮುಕೇಶ್ ತಿಳಿಸಿದರು.

ಗಂಡಸಿ ಸೇಂಟ್ ಜಾನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2024-2025ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಗುರುವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿನಿ ಪೂರ್ಣಿಮಾ 620 ಅಂಕ ಗಳಿಸುವುದರೊಂದಿಗೆ ರಾಜ್ಯ ಮಟ್ಟದಲ್ಲಿ 5 ಸ್ಥಾನ ಪಡೆದಿರುವುದು ಸಂತೋಷದ ವಿಷಯವಾಗಿದೆ. ನಮ್ಮ ಶಾಲೆ ಗ್ರಾಮಾಂತರ ಪ್ರದೇಶದಲ್ಲಿ ಇರುವುದರಿಂದ ರೈತಾಪಿ ವರ್ಗದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಕಲಿಯುತ್ತಿದ್ದು, ಕಡಿಮೆ ಶುಲ್ಕ ತೆಗೆದುಕೊಂಡು ಉತ್ತಮ ದರ್ಜೆಯ ಶಿಕ್ಷಣ ನೀಡಲಾಗುತ್ತಿದೆ. ಶಾಲೆಗೆ ಉತ್ತಮ ಫಲಿತಾಂಶ ಬರಲು ಯೋಜನೆಗಳನ್ನು ರೂಪಿಸಿಕೊಂಡು ಪ್ರತಿ 15 ದಿನಕ್ಕೆ ಒಮ್ಮೆ ಪಾಲಕರು ಶಾಲೆಗೆ ಭೇಟಿ ನೀಡಿ ತಮ್ಮ ಮಗುವಿನ ಕಲಿಕೆಯ ಬಗ್ಗೆ ಶಿಕ್ಷಕರ ಜತೆ ಚರ್ಚಿಸುವುದು, ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಗುಂಪು ಅಧ್ಯಯನಕ್ಕೆ ಆದ್ಯತೆ. ಪ್ರತಿ ಗುಂಪಿಗೂ ಪ್ರತಿ ವಾರ ಕಿರು ಪರೀಕ್ಷೆಗಳು, ರಾತ್ರಿ ವೇಳೆಯೂ ಶಿಕ್ಷಕರು ತರಗತಿ ತೆಗೆದುಕೊಳ್ಳುವುದು, ಶಿಕ್ಷಕರಿಂದ ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕೆಯ ಬಗ್ಗೆ ನಿಗಾ ವಹಿಸುವುದು ಈ ಎಲ್ಲ ಚಟುವಟಿಕೆಯಿಂದ ಶಾಲೆಗೆ ಉತ್ತಮ ಫಲಿತಾಂಶ ಬರಲು ಸಾಧ್ಯವಾಯಿತು ಎಂದರು.

ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಪೂರ್ಣಿಮಾ, ನೇಹಾ, ಖುಷಿ, ಹೇಮಂತ್‌ಗೌಡ, ಭುವನಾ, ಸಂಜನಾ, ಸಂಪ್ರೀತಾ, ಯಶಸ್ವಿ, ಗಗನ್‌ಗೌಡ, ಚುಕ್ಕಿ ಚಂದಮಾ ಅವರನ್ನು ಸನ್ಮಾನಿಸಲಾಯಿತು.

ರೇ.ಫಾದರ್ ಸಂತ ಆಂತೋನಪ್ಪ, ಫಾ.ಜಾನ್, ಎಸ್‌ಡಿಎಂಸಿಯ ಲೋಹಿತ್ ಕುಮಾರ್, ಚಂದ್ರೇಗೌಡ, ಶಿಕ್ಷಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net