

ಅರಕಲಗೂಡು: ಸ್ಮರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಗುರಿ ಸಾಧನೆಗೆ ವಿಪುಲವಾದ ಅವಕಾಶಗಳಿದ್ದು, ಪರಿಶ್ರಮದಿಂದ ಕಲಿತು ಉನ್ನತ ಸ್ಥಾನಕ್ಕೇರಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ಶಾಸಕ ಎ. ಮಂಜು ಸಲಹೆ ನೀಡಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗಷ್ಟೆ ಸೀಮಿತವಾಗದೆ ಹೆಚ್ಚಿನ ಜ್ಞಾನ ಗಳಿಸಲು ಆಸಕ್ತಿ ವಹಿಸಬೇಕು. ಇದು ಹೆಚ್ಚಿನ ಅವಕಾಶದ ಬಾಗಿಲುಗಳನ್ನು ತೆರೆಯಲು ಸಹಾಯಕವಾಗಲಿದೆ. ಇಲಾಖೆ ಮತ್ತು ಸರ್ಕಾರದ ಜತೆ ಚರ್ಚಿಸಿ ಕಾಲೇಜಿನ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ, ಅತಿಥಿ ಉಪನ್ಯಾಸಕರ ಸಮಸ್ಯೆ ಕುರಿತು ಸದನದಲ್ಲಿ ಚರ್ಚಿಸುವುದಾಗಿ ಹೇಳಿದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಚ್.ಎಸ್.ಮಂಜು ಶೆಟ್ಟಿಗೌಡ ಮಾತನಾಡಿ, ಕಾಲೇಜಿನಲ್ಲಿ ಹಲವು ಸಮಸ್ಯೆಗಳಿದ್ದು ಇವುಗಳನ್ನು ಪರಿಹರಿಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ಕಲ್ಪಿಸಿಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದರು.
ಪ್ರಾಂಶುಪಾಲೆ ಟಿ.ಪದ್ಮಾ ಮಾತನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಶಶಿಕುಮಾರ್, ಮೋಹನ್ ಮಂಜು, ನಿತ್ಯಜ್ಯೋತಿ ನಾಗರಾಜ್, ಗಾಯತ್ರಿ, ಸವಿತಾ ಸುರೇಶ್, ಎಚ್.ಟಿ.ಲೋಕೇಶ್, ಮಹೇಶ್ವರಿ, ಚಂದ್ರಶೇಖರ್, ಪಾಲಕ ವರ್ಗದ ಸದಸ್ಯರಾದ ರೇಖಾ, ಶಾಂತಾ, ಎಚ್.ಕೆ.ಶ್ರೀನಿವಾಸ್, ಜಗದೀಶ್ ಇತರರು ಇದ್ದರು.
ಕಳೆದ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.