ವಿದ್ಯಾರ್ಥಿಗಳ ಕಲಿಕೆಯ ತುಡಿತ, ಛಲವನ್ನು ಗೌರವಿಸೋಣ

1001556913
Published on

ಹೊಳೆನರಸೀಪುರ: ಪ್ರತಿಭಾವಂತ ವಿದ್ಯಾರ್ಥಿಗಳ ಕಲಿಕೆಯ ತುಡಿತ ಹಾಗೂ ಸಾಧಿಸಬೇಕೆಂಬ ಛಲವನ್ನು ಗೌರವಿಸಬೇಕಾದ್ದು ನಮ್ಮ ಕರ್ತವ್ಯ ಎಂದು ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಉಪಾಧ್ಯಕ್ಷ ಹಾಗೂ ಉದ್ಯಮಿ ಟಿ.ಶಿವಕುಮಾರ್ ತಿಳಿಸಿದರು.

ಪಟ್ಟಣದ ಆರ್ಯ ಈಡಿಗರ ರಾಮಮಂದಿರದಲ್ಲಿ ದಿ. ಗುತ್ತಮ್ಮ ಯಜಮಾನ್ ತಮ್ಮೇಗೌಡ ಹಾಗೂ ದಿ.ಗೌರಮ್ಮ ಟಿ.ಮಲ್ಲೇಶ್ ಅವರ ಸ್ಮರಣಾರ್ಥವಾಗಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸುತ್ತಿದ್ದಾರೆ, ಇದು ಸಂತೋಷದ ಸಂಗತಿ. ಹೆಣ್ಣು ಮಕ್ಕಳಿಗೆ ಕಲಿಕೆಗೆ ಪೂರಕವಾದ ಅಗತ್ಯ ವ್ಯವಸ್ಥೆ ಕಲ್ಪಿಸಿ ಕೊಟ್ಟಲ್ಲಿ ಅವರು ಉನ್ನತ್ತ ವ್ಯಾಸಂಗ ಮಾಡಿ, ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ. ಆದ್ದರಿಂದ ನಮ್ಮ ಹಿರಿಯರು ಪಾಲನೆ ಮಾಡುತ್ತಿದ್ದ 18 ವರ್ಷವಾಗಿದೆ ಮದುವೆ ಮಾಡಿ ಕೊಳಿಸೋಣವೆಂಬ ಮನಸ್ಥಿತಿ ಬಿಟ್ಟು ಕಲಿಕೆಗೆ ಹೆಚ್ಚು ಪ್ರೋತ್ಸಾಹ ನೀಡೋಣ ಎಂದರು.

ವಿದ್ಯಾರ್ಥಿಗಳು ಕಲಿಕೆಯ ಸಮಯದಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಲು ಯೋಗ, ಪ್ರಾಣಾಯಾಮ, ಕ್ರೀಡೆ ಹಾಗೂ ಮನಸ್ಸಿಗೆ ಉಲ್ಲಾಸ ನೀಡುವ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿಸುವ ಮೂಲಕ ಆತ್ಮಸ್ಥೆರ್ಯ ಹೆಚ್ಚಿಸಿಕೊಂಡು ಮುನ್ನಡೆಯುತ್ತ ಯಶಸ್ವಿ ಜೀವನ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.

ಮುಂದಿನ ವರ್ಷಗಳಲ್ಲಿ ಇದೇ ರೀತಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸುಸೂತ್ರವಾಗಿ ಮುನ್ನಡೆಸಲು ದಿ.ಗುತ್ತಮ್ಮ ಯಜಮಾನ್ ತಮ್ಮೇಗೌಡ ಹಾಗೂ ದಿ.ಗೌರಮ್ಮ ಟಿ.ಮಲ್ಲೇಶ್ ಹೆಸರಿನಲ್ಲಿ ಟ್ರಸ್ಟ್ ರಚಿಸುವುದಾಗಿ ತಿಳಿಸಿದರು. ಹಿಂದುಳಿದ ವರ್ಗಗಳ ಎಲ್ಲ ಜನಾಂಗದ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ, ಈ ರೀತಿಯ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜನೆ ಮಾಡುವ ಇಂಗಿತವಿದೆ ಎಂದರು.

ಮೈಸೂರು ಶಾಲಾ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾಗಿದ್ದ ಎಚ್.ಎನ್.ಗೀತಾಂಬ, ಪುರಸಭೆ ಮಾಜಿ ಅಧ್ಯಕ್ಷೆ ಸುಧಾನಳಿನಿ, ಹಾಸನ ಸೆಂಟ್ರಲ್ ಕಾಮರ್ಸ್ ಕಾಲೇಜು ಸಂಸ್ಥಾಪಕ ಮಹೇಶ್, ತಾಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ದೊಡ್ಡಮಲ್ಲೇಗೌಡ ಮಾತನಾಡಿದರು.

ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಗ್ರಿ, ಇಂಜಿನಿಯರಿಂಗ್ ಹಾಗೂ ಇತರ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ 22 ವಿದ್ಯಾರ್ಥಿಗಳನ್ನು ಸನ್ಮಾನಿಸಿ, ನಗದು ಬಹುಮಾನ ನೀಡಲಾಯಿತು.

ಹಿರಿಯರಾದ ಪುಟ್ಟಮ್ಮ, ವೆಂಕಟಸ್ವಾಮಿ, ದೇವರಮುದ್ದನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಮರೀಗೌಡ, ಪುರಸಭೆ ಮಾಜಿ ಸದಸ್ಯ ಎಚ್.ವಿ.ಸುರೇಶ್, ಡಿಸಿಸಿ ಬ್ಯಾಂಕಿನ ಅರುಣಾ, ಶಿಕ್ಷಕಿ ಮಾಲತಿ, ಉದ್ಯಮಿ ಎಚ್.ಎಸ್.ಕಾಂತರಾಜು, ಎಚ್.ಸಿ.ನಾಗರಾಜು, ಎಚ್.ವಿ.ರಮೇಶ್, ಎಚ್.ಎನ್.ಜಯರಾಮ, ಎಚ್.ವಿ.ರವಿಕುಮಾರ್, ಪಾಪೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net