ವಿದ್ಯಾರ್ಥಿ ಜೀವನವನ್ನು ಸಮರ್ಪಕವಾಗಿ ಬಳಸಿಕೊಳ್ಳಿ

29 bannur 1.
Published on

ಬನ್ನೂರು: ವಿದ್ಯಾರ್ಥಿ ಜೀವನವು ಜೀವನದ ಅತ್ಯಂತ ಮಹತ್ವದ ಘಟ್ಟವಾಗಿದ್ದು, ಎಲ್ಲರೂ ಈ ಕಾಲಘಟ್ಟವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಡಾ.ಮಹೇಂದ್ರಸಿಂಗ್ ಕಾಳಪ್ಪ ಸಲಹೆ ನೀಡಿದರು.

ಪಟ್ಟಣದ ಚಾಮನಹಳ್ಳಿಯಲ್ಲಿರುವ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು. ಇಂದು ತಂದೆ-ತಾಯಿಯರು ತಮ್ಮ ಜೀವನವನ್ನು ಧಾರೆಯೆರೆದು ತಮ್ಮ ಮಕ್ಕಳ ಭವಿಷ್ಯ ರೂಪಿಸಲು ಪ್ರಯತ್ನಿಸುತ್ತಿರುತ್ತಾರೆ. ಅಂತಹ ಪಾಲಕರಿಗೆ ನೀವು ನಿಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿ ನಿಮ್ಮತನವನ್ನು ಉಳಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಆದಿಚುಂಚನಗಿರಿ ಸಂಸ್ಥಾನ ಮಠದ ಶ್ರೀಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ, ವಿದ್ಯೆ ಕದಿಯಲಾರದ ಸ್ವತ್ತಾಗಿದ್ದು, ಎಲ್ಲರೂ ತಮ್ಮ ನಿಗದಿತ ವಯಸ್ಸಿನಲ್ಲಿ ಕಲಿಕೆ ಆದ್ಯತೆ ನೀಡಿ, ಜೀವನದಲ್ಲಿ ಎನಾದರೂ ಸಾಧಿಸಬೇಕು ಎಂದು ಹೇಳಿದರು.

ಪ್ರತಿ ವಿದ್ಯಾರ್ಥಿ ನಿತ್ಯ ಕಲಿಕೆಯಲ್ಲಿ ತೊಡಗಿ, ಶಿಕ್ಷಣಕ್ಕೆ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡು ಮತ್ತೊಬ್ಬ ಕಲಿಕಾ ವಿದ್ಯಾರ್ಥಿಗೆ ಮಾದರಿಯಾಗುವಂತಿರಬೇಕು ಎಂದು ಹೇಳಿದರು. ನಂತರ ಹೊಸ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಸಂಸ್ಕೃತಿ ಚಿಂತಕ ಪೃಥ್ವಿರಾಜ್, ಉಪ ನಿರೀಕ್ಷಕ ಕಾಶೀನಾಥ್, ಉಮಾಶಂಕರ್, ಸುರೇಶ್, ರಾಜಶೇಖರ್, ನಾಗಲಿಂಗಸ್ವಾಮಿ, ವ್ಯವಸ್ಥಾಪಕ ಆನಂದ್‌ಗೌಡ, ಪ್ರಾಂಶುಪಾಲ ಅಶ್ವಥ್, ಉಪನ್ಯಾಸಕ ಅಶೋಕ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net