ವಿದ್ಯಾಗಮಕ್ಕೆ ವಿದ್ಯಾರ್ಥಿಗಳ ಆಗಮನ

1 joida 01.
Published on

ಕಾರವಾರ: 9 ತಿಂಗಳ ಕೋವಿಡ್ ರಜೆಯ ಬಳಿಕ ಶುಕ್ರವಾರ ಜಿಲ್ಲೆಯ ಶಾಲೆ ಹಾಗೂ ಕಾಲೇಜ್​ಗಳಲ್ಲಿ ತರಗತಿಗಳು ಪ್ರಾರಂಭವಾದವು. ಸ್ಯಾನಿಟೈಸರ್ ಹಾಕಿ ಸಮವಸ್ತ್ರ ಪಠ್ಯ ಕೊಟ್ಟು ವಿದ್ಯಾರ್ಥಿ ಗಳನ್ನು ಶಿಕ್ಷಕರು ಶಾಲೆಗೆ ಬರಮಾಡಿಕೊಂಡು ತರಗತಿ ಪ್ರಾರಂಭಿಸಿದರು. ಕೆಲವೆಡೆ ಶಾಲೆಗಳಿಗೆ ತೋರಣ ಕಟ್ಟಲಾಗಿತ್ತು. ಎಲ್ಲ ಕಡೆ ಕಟ್ಟು ನಿಟ್ಟಾಗಿ ಕೋವಿಡ್ ನಿಯಮ ಪಾಲಿಸಲಾಯಿತು.

ಕಾಲೇಜ್​ಗಳಲ್ಲಿ ದ್ವಿತೀಯ ಪಿಯುಸಿ, ಹೈಸ್ಕೂಲ್​ಗಳಲ್ಲಿ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ತರಗತಿಗಳನ್ನು ಪ್ರಾರಂಭಿಸಲಾಯಿತು. 6 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳಿಗೆ ಗುಂಪು ಮಾಡಿ ವಿದ್ಯಾಗಮ ತರಗತಿ ಪ್ರಾರಂಭಿಸಲಾಯಿತು.

ಜಿಪಂ ಸಿಇಒ ಪ್ರಿಯಾಂಗಾ ಎಂ. ಡಿಡಿಪಿಐ ಹರೀಶ ಗಾಂವಕರ್, ನೋಡಲ್ ಅಧಿಕಾರಿ ಶ್ರೀಕಾಂತ ಹೆಗಡೆ, ಬಿಇಒ ಶಾಂತೇಶ ನಾಯಕ ವಿವಿಧ ಶಾಲೆಗಳಿಗೆ ತೆರಳಿ ಪರಿಶೀಲಿಸಿದರು.

ಸಮವಸ್ತ್ರ ಪೂರೈಕೆ: ಈಗಾಗಲೇ ಎಲ್ಲ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಗಿದೆ. ಸಮವಸ್ತ್ರಗಳು ಕಾರವಾರ ಶೈಕ್ಷಣಿಕ ಜಿಲ್ಲೆಯ ಕಾರವಾರ ತಾಲೂಕಿಗೆ ಪೂರೈಕೆಯಾಗಿದ್ದು, ಶೀಘ್ರದಲ್ಲಿ ಉಳಿದೆಲ್ಲ ತಾಲೂಕುಗಳಿಗೂ ಪೂರೈಕೆಯಾಗಲಿವೆ ಎಂದು ಡಿಡಿಪಿಐ ಹರೀಶ ಗಾಂವಕರ್ ಮಾಹಿತಿ ನೀಡಿದ್ದಾರೆ.

ಶಿರಸಿ ವರದಿ: ವಿದ್ಯಾಗಮ-2 ಹಾಗೂ ಶಾಲಾ ಪ್ರಾರಂಭೋತ್ಸವದ ಮೊದಲ ದಿನವಾದ ಶುಕ್ರವಾರ ತಾಲೂಕಿನಾದ್ಯಂತ ಮಕ್ಕಳು ಲವಲವಿಕೆಯಿಂದ ಶಾಲೆಗಳಿಗೆ ಆಗಮಿಸಿ ಪಾಠ ಆಲಿಸಿದರು. ತಾಲೂಕಿನ 500ಕ್ಕೂ ಹೆಚ್ಚಿನ ಶಾಲೆಗಳಲ್ಲಿ ವಿದ್ಯಾಗಮ ತರಗತಿಗಳನ್ನು ಪ್ರಾರಂಭಿಸಲಾಯಿತು. ಮೊದಲ ದಿನ ತಾಲೂಕಿನಲ್ಲಿ ಅಂದಾಜು 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಗಳಿಗೆ ಆಗಮಿಸಿದ್ದರು.ಬಹುತೇಕ ಶಾಲಾ-ಕಾಲೇಜಿನವರು ವಿದ್ಯಾರ್ಥಿಗಳಿಗೆ ಹೂ ಗುಚ್ಛ ನೀಡಿ ಸ್ವಾಗತಿಸಿದರು. ವಿದ್ಯಾರ್ಥಿಗಳು ತಾವು ತಂದ ತಿಂಡಿ ಇನ್ನಿತರ ಪದಾರ್ಥಗಳನ್ನು ಬೇರೊಬ್ಬರೊಂದಿಗೆ ಹಂಚಿಕೊಳ್ಳದಂತೆ ಸಿಬ್ಬಂದಿಗೆ ನೋಡಿಕೊಳ್ಳುವ ಹೊಣೆಗಾರಿಕೆ ನೀಡಲಾಗಿತ್ತು. ಸಾರಿಗೆ ಸಂಸ್ಥೆ ಬಸ್​ಗಳಲ್ಲಿ ವಿದ್ಯಾರ್ಥಿಗಳ ಗುರುತಿನ ಚೀಟಿ ತೋರಿಸಿದರೆ ಉಚಿತವಾಗಿ ಓಡಾಡಲು ವ್ಯವಸ್ಥೆ ಕಲ್ಪಿಸಲಾಗಿತ್ತು.

ಯಲ್ಲಾಪುರ ವರದಿ: ತಾಲೂಕಿನಲ್ಲಿ ಶುಕ್ರವಾರ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಾಲೆ ಆರಂಭೋತ್ಸವ ನಡೆಯಿತು. ವಿದ್ಯಾಗಮ-2 ಯೋಜನೆ ಆರಂಭದ ದಿನ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಿಕ್ಷಕರು, ಎಸ್​ಡಿಎಂಸಿ ಪ್ರಮುಖರು ಬರ ಮಾಡಿಕೊಂಡರು. ಕಿರವತ್ತಿ ಗ್ರಾ.ಪಂ ವ್ಯಾಪ್ತಿಯ ಅಲ್ಕೇರಿ ಗೌಳಿವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಮಾಸ್ಕ್ ಹಾಗೂ ಪುಷ್ಪಗುಚ್ಛದೊಂದಿಗೆ ಸಿಹಿ ವಿತರಿಸಿ ಸ್ವಾಗತಿಸಲಾಯಿತು. ಶಿಕ್ಷಕ ಗಂಗಾಧರ.ಎಸ್.ಎಲ್. ನೇತೃತ್ವದಲ್ಲಿ ಮಕ್ಕಳ ಸ್ವಾಗತಕ್ಕಾಗಿ ಶಾಲೆಯನ್ನು ಅಲಂಕರಿಸಲಾಗಿತ್ತು.

ಜೊಯಿಡಾ ವರದಿ: ತಾಲೂಕಿನ 44 ಹಿರಿಯ ಪ್ರಾಥಮಿಕ ಶಾಲೆ ಹಾಗೂ 12 ಸರ್ಕಾರಿ ಮತ್ತು 4 ಖಾಸಗಿ ಶಾಲೆಗಳ ಪ್ರಾರಂಭೋತ್ಸವ ಶುಕ್ರವಾರ ಅದ್ದೂರಿಯಾಗಿ ನಡೆಯಿತು. ವಿದ್ಯಾಗಮ ಕಾರ್ಯಕ್ರಮದಂತೆ 6ರಿಂದ 7, 8ರಿಂದ 10ನೇ ತರಗತಿಗಳನ್ನು ಆರಂಭಿಸಲಾಯಿತು. ಮಕ್ಕಳಿಗೆ ಶಿಕ್ಷಕರು ಹೂವು ನೀಡುವ ಮೂಲಕ ಶಾಲೆಯ ಒಳಗೆ ಸ್ವಾಗತಿಸಿದರು. ಬಿಇಒ ಪಿ.ಎಸ್. ಹಿರೇಮಠ, ಶಿಕ್ಷಕರು ಇದ್ದರು.

ಭಟ್ಕಳ ವರದಿ: ತಾಲೂಕಿನ ಕುಂಟವಾಣಿ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಸಂಭ್ರಮದಿಂದ ನಡೆಯಿತು. ಶಾಲೆಯನ್ನು ತಳಿರು, ತೋರಣಗಳಿಂದ ಸಿಂಗರಿಸಿ ವಾದ್ಯದೊಂದಿಗೆ ಮಕ್ಕಳನ್ನು ಬರಮಾಡಿಕೊಳ್ಳಲಾಯಿತು. ಎಸ್​ಡಿಎಂಸಿ ಉಪಾಧ್ಯಕ್ಷ ಅನಂತಶೆಟ್ಟಿ, ಶಿಕ್ಷಣ ಸಂಯೋಜಕ ಆರ್.ಎಸ್.ಗೊಂಡ, ಶಾಲೆಯ ಪ್ರಭಾರ ಮುಖ್ಯಾಧ್ಯಾಪಕ ಡಾ. ಸುರೇಶ ತಾಂಡೇಲ ಇತರರು ಉಪಸ್ಥಿತರಿದ್ದರು.

ದಾಂಡೇಲಿ ವರದಿ: ತಾಲೂಕಿನಲ್ಲಿ ಮೊದಲ ದಿನ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಶೇ.40 ರಷ್ಟು ಮಾತ್ರ ಕಂಡು ಬಂದಿತು. ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ, ಬುಧವಾರ ಶುಕ್ರವಾರ 6ನೇ ತರಗತಿಗೆ ಹಾಗೂ ಮಂಗಳವಾರ, ಗುರುವಾರ, ಶನಿವಾರ 7ನೇ ತರಗತಿಗೆ ವಿದ್ಯಾರ್ಥಿಗಳು ಬರಲು ವ್ಯವಸ್ಥೆ ಮಾಡಲಾಗಿದೆ. ಆಂಗ್ಲ ಮಾಧ್ಯಮ ಲಯನ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಪ್ರವೇಶ ದ್ವಾರದ ಬಳಿ ಪೂಜೆ ಸಲ್ಲಿಸಿ ರಿಬ್ಬನ್ ಕತ್ತರಿ ಸುವ ಮೂಲಕ ತರಗತಿಗಳಿಗೆ ಪ್ರವೇಶಿಸಿದರು.

ಹಳಿಯಾಳ ವರದಿ: ತಾಲೂಕಿನಲ್ಲಿ ‘ಹೋಗೋಣ ಶಾಲೆಗೆ’ ಶೈಕ್ಷಣಿಕ ಯೋಜನೆಗೆ ತಾಲೂಕಿನಾದ್ಯಂತ ಉತ್ತಮ ಸ್ಪಂದನೆ ದೊರಕಿದೆ. ತೋರಣ, ರಂಗೋಲಿಗಳನ್ನು ಹಾಕಿ ಶಾಲೆಗಳನ್ನು ಅಲಂಕರಿಸಲಾಗಿತ್ತು. ಇನ್ನೂ ಕೆಲವೆಡೆ ಕೋವಿಡ್ ಸುರಕ್ಷತಾ ನಿಯಮಗಳನ್ನು ಸಾರುವ ಫಲಕಗಳನ್ನು ಶಾಲೆಗಳ ಪ್ರವೇಶ ದ್ವಾರದಲ್ಲಿ ಹಾಕಲಾಗಿತ್ತು. ತರಗತಿ ಆರಂಭಕ್ಕೂ ಮುನ್ನ ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಯೋಗಾಭ್ಯಾಸ ಹಾಗೂ ಕೋವಿಡ್ ಸುರಕ್ಷತಾ ಕ್ರಮಗಳನ್ನು ಕಲಿಸಿದರು. ಇನ್ನೂ ಕೆಲವಡೆ ಮಕ್ಕಳಿಗೆ ಸಮವಸ್ತ್ರಗಳನ್ನು ವಿತರಿಸಲಾಯಿತು.

ಸಿದ್ದಾಪುರ ವರದಿ: ತಾಲೂಕಿನಾದ್ಯಂತ 6ರಿಂದ 9ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ವಿದ್ಯಾಗಮ ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ನಿಯಮಿತ ತರಗತಿ ಆರಂಭವಾಗಿದ್ದು ವಿದ್ಯಾರ್ಥಿಗಳು ಸಂತಸದಿಂದ ಶಾಲಾ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರು.

ಮುಂಡಗೋಡ ವರದಿ: ತಾಲೂಕಿನಾದ್ಯಂತ ಶಾಲೆಗಳಿಗೆ ವಿದ್ಯಾರ್ಥಿಗಳು ಉತ್ಸಾಹದಿಂದ ಆಗಮಿಸಿದರು. ಪಟ್ಟಣದ ಆದಿಜಾಂಬವ ಕನ್ನಡ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಸಂಸ್ಥೆಯ ಮುಖ್ಯಸ್ಥ ಎಸ್.ಫಕೀರಪ್ಪ ಶುಕ್ರವಾರ ಸಿಹಿ ಮತ್ತು ಗುಲಾಬಿ ಹೂ ನೀಡಿ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಎಸ್.ಡಿ.ಮುಡೆಣ್ಣವರ ಸ್ಯಾನಿಟೈಸರ್ ನೀಡಿದರು. ಶಿಕ್ಷಕರಾದ ರವಿ ಅಕ್ಕಿವಳ್ಳಿ, ಎಸ್.ಎಸ್.ಭದ್ರಶೆಟ್ಟಿ, ಎಸ್.ಸಿ.ಪಾಟೀಲ, ಎಂ.ಎಸ್.ಪಾಟೀಲ, ಆರ್.ಬಿ.ಚವ್ಹಾಣ, ಮತ್ತು ಪಿ.ಸಿ.ಐನಾಪೂರ ಇದ್ದರು.

5987 ವಿದ್ಯಾರ್ಥಿಗಳು ಹಾಜರು ಜಿಲ್ಲೆಯಲ್ಲಿ ಒಟ್ಟು 99 ಪಿಯು ಕಾಲೇಜ್​ಗಳಿದ್ದು, 13459 ವಿದ್ಯಾರ್ಥಿಗಳಿದ್ದಾರೆ. ಶುಕ್ರವಾರ ಸರ್ಕಾರಿ ಕಾಲೇಜ್​ಗಳಲ್ಲಿ 2852 , ಖಾಸಗಿ ಹಾಗೂ ಅನುದಾನಿತ ಕಾಲೇಜ್​ಗಳಲ್ಲಿ 3135 ವಿದ್ಯಾರ್ಥಿಗಳು ಸೇರಿ ಒಟ್ಟು 5987 ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿದ್ದರು.

12 ಸಾವಿರ ಎಸ್ಸೆಸ್ಸೆಲ್ಸಿ ಮಕ್ಕಳು ಬಂದರು… ಶಿರಸಿ ಹಾಗೂ ಕಾರವಾರ ಎರಡೂ ಶೈಕ್ಷಣಿಕ ಜಿಲ್ಲೆಗಳಲ್ಲಿ ಒಟ್ಟಾರೆ 20159 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿದ್ದು, ಮೊದಲ ದಿನ ಸರ್ಕಾರಿ ಶಾಲೆಗಳಲ್ಲಿ 5012, ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ 7228 ವಿದ್ಯಾರ್ಥಿಗಳು ಸೇರಿ 12,240 ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net