

ಬಾಗಲಕೋಟೆ: ಕಾಲೇಜಿನ ಪ್ರಾಚಾರ್ಯರೊಬ್ಬರಿಗೆ ನಿವೃತ್ತಿಯ ಪಿಂಚಣಿ, ಸೇವಾ ಸೌಲಭ್ಯ ನೀಡದ ಹಿನ್ನಲೆಯಲ್ಲಿ ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶದ ಮೇರೆಗೆ ಟೆಬಲ್, ಖುರ್ಚಿ ಸೇರಿದಂತೆ ವಿವಿಧ ವಸ್ತುಗಳನ್ನು ಜಪ್ತಿ ಮಾಡಿದ ಘಟನೆ ಶುಕ್ರವಾರ ನಡೆದಿದೆ.
ಇಲ್ಲಿನ ವಿದ್ಯಾ ಪ್ರಸಾರಕ ಮಂಡಳದ ಎಸ್.ಡಿ.ಹೆರಂಜಲ ಕಲಾ, ಶಂಕ್ರಪ್ಪ ಸಕ್ರಿ ವಾಣಿಜ್ಯ ಹಾಗೂ ಆರ್.ದೊಡ್ಡಿಹಾಳ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ಟೆಬಲ್, ಖುರ್ಚಿ, ಕಂಪ್ಯೂಟರ್ ಸೇರಿದಂತೆ ಅನೇಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಈ ಕಾಲೇಜಿನಲ್ಲಿ ಗೀತಾ ಕಂಚಿ ಎನ್ನುವವರು ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಕಾರಣವಿಲ್ಲದೆ ಆಡಳಿತ ಮಂಡಳಿ ಅವರನ್ನು ಪ್ರಾಚಾರ್ಯ ಹುದ್ದೆ ಹಾಗೂ ನೌಕರಿಯಿಂದ ತೆಗೆದು ಹಾಕಿತ್ತು. ಇದನ್ನು ಪ್ರಶ್ನಿಸಿ ಗೀತಾ ಕಂಚಿ ಅವರು ಕೋರ್ಟ್‌ಗೆ ಮೊರೆ ಹೋಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಗೀತಾ ಕಂಚಿ ಅವರಿಗೆ ೩೫,೫೨,೧೨೩ ರೂ. ಸೇವಾ, ಸೌಲಭ್ಯ ನೀಡುವಂತೆ ವಿದ್ಯಾ ಪ್ರಸಾರಕ ಮಂಡಳದ ಆಡಳಿತ ಮಂಡಳಿಗೆ ಆದೇಶಿಸಿತ್ತು. ಆದರೇ ಈ ಹಣ ಆಡಳಿತ ಮಂಡಳಿ ಪಾವತಿ ಮಾಡದ ಹಿನ್ನಲೆಯಲ್ಲಿ ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಕಾಲೇಜಿನ ವಿವಿಧ ವಸ್ತುಗಳನ್ನು ಜಪ್ತಿ ಮಾಡುವಂತೆ ಆದೇಶ ಮಾಡಿದ್ದರಿಂದ ಶುಕ್ರವಾರ ಕಾಲೇಜಿನ ೧೬ ಕ್ಕೂ ಹೆಚ್ಚು ವಿವಿಧ ವಸ್ತುಗಳನ್ನು ಜಪ್ತಿ ಮಾಡಿ ಕೋರ್ಟಗೆ ಒಪ್ಪಿಸಲಾಗಿದೆ. ನ್ಯಾಯವಾದಿ ವಿಜಯ ಬರಗುಂಡಿ ಕಕ್ಷಿದಾರ ಗೀತಾ ಕಂಚಿ ವಾದ ಮಂಡಿಸಿದ್ದರು.