ವಿದ್ಯ ಯಾರಪ್ಪನ ಆಸ್ತಿನೂ ಅಲ್ಲ

bkt-13-11
Published on

ಬಾಗಲಕೋಟೆ : ರಾಮಾಯಣ ಬರೆದವರು ಮಹಿರ್ಷಿ ವಾಲ್ಮೀಕಿ, ಮಹಾಭಾರತ ಬರೆದವರು ವ್ಯಾಸ ಬೆಸ್ತ ಜಾತಿಯವರು, ಸಂವಿಧಾನ ಬರೆದಿದ್ದು ಅಸ್ಪೃಶ್ಯ ದಲಿತ ಡಾ. ಬಿ.ಆರ್‌.ಅಂಬೇಡ್ಕರ್ ಅವರು. ಹೀಗಾಗಿ ವಿದ್ಯ ಯಾರಪ್ಪನ ಆಸ್ತಿಯೂ ಅಲ್ಲ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದಲ್ಲಿ ಬಸವಗೋಪಾಲ ನೀಲಮಾಣಿಕ ಮಠದ ವತಿಯಿಂದ ಸೋಮವಾರ ಏರ್ಪಡಿಸಿದ್ದ ವಿಶ್ವಶಾಂತಿಗಾಗಿ ಸರ್ವಧರ್ಮ ಮಹಾಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೇಲ್ಜಾತಿಯ ಅವಿದ್ಯಾವಂತ ಇದ್ದರೂ ಆತನಿಗೆ ಬುದ್ಧಿ, ಸ್ವಾಮಿ ಎಂದು ಸಂಬೋಧಿಸುವ ಜನರು, ಅದೇ ಕೆಳಜಾತಿ ವ್ಯಕ್ತಿ ವಿದ್ಯಾವಂತ ಆಗಿದ್ದರೂ ಏಕವಚನದಲ್ಲಿ ಮಾತನಾಡಿಸುತ್ತಾರೆ. ಇದೇ ಗುಲಾಮಗಿರಿಯ ಸಂಕೇತ. ಇದನ್ನು ಕಿತ್ತು ಹಾಕಬೇಕಿದೆ. ಸ್ವಾಭಿಮಾನದಿಂದ ಬದಕಲು ವಿದ್ಯ ಕಲಿಯುತ್ತೇವೆ. ವಿದ್ಯ ಕಲಿತು ಸಹ ಮೌಡ್ಯಗಳು, ದಾಚಾರ ಆಚರಿಸಿದರೆ ವಿದ್ಯಾವಂತ ಆದರೂ ಯಾವುದೇ ಪ್ರಯೋಜನ ಇಲ್ಲ ಎಂದರು.

ಹೊಟ್ಟೆಗೆ ಹಿಟ್ಟಿಲ್ಲ, ಒಳ್ಳೆಯ ಬಟ್ಟೆಯಿಲ್ಲ, ಬಡತನ ಇದ್ದರೆ ಇದೆಲ್ಲ ಹಣೆಬರಹ ಎನ್ನುತ್ತಾರೆ. ಇದನ್ನು ದೇವರು ಬರೆದಿದ್ದಾ? ಇಲ್ಲ, ನಮಗೆ ಅವಕಾಶ ಸಿಕ್ಕಿರಲ್ಲ, ಹೀಗಾಗಿ ವಿದ್ಯ‌ಪಡೆಯಲಾಗಿಲ್ಲ. ನೂರಕ್ಕೆ 85 ರಷ್ಟು ಜನರಿಗೆ ವಿದ್ಯ ಸಿಕ್ಕಿರಲಿಲ್ಲ. ಮಂತ್ರ, ಸಂಸ್ಕೃತ ಕಲಿಯಲು ಅವಕಾಶ ಸಿಕ್ಕಿರಲಿಲ್ಲ. ಇದನ್ನು ಹಣೆಹರಹ ಎನ್ನಬಾರದು ಎಂದು ತಿಳಿಸಿದರು.

ಜಾತಿ ವ್ಯವಸ್ಥೆ ಚಲನೆ ಇಲ್ಲದ ಜಡತ್ವ ಇರುವ ವ ವ್ಯವಸ್ಥೆಯಾಗಿದೆ. ಇದರಿಂದ ಇಷ್ಟು ವರ್ಷಗಳಾದರೂ ಸಮಾಜದಲ್ಲಿ ಬದಲಾವಣೆ ಆಗಿಲ್ಲ. ಬುದ್ಧ, ಬಸವಣ್ಣ ಸಮಸಮಾಜ, ಜಾತ್ಯಾತೀತ ಸಮಾಜದ ಬಗ್ಗೆ ಹೇಳಿ ಎಷ್ಟು ವರ್ಷಗಳಾದವು? ಇವತ್ತಿಗೂ ಅವರು ಹೇಳಿದಂತ ಜಾತಿರಹಿತ ಸಮಾಜ ನಿರ್ಮಾಣ ಆಗಿಲ್ಲ. ಇವನಾರವ ಇವನಾರವ ಎಂದೇನಿಸಯ್ಯ,ಇವ ನಮ್ಮವ ಇವನಮ್ಮವ ಎಂದೇನಿಸಯ್ಯ ಎಂದು ಬಸವಣ್ಣ ಹೇಳಿ ಇಷ್ಟು ಶತಮಾನ ಕಳೆದರೂ ಜಾತಿ, ವರ್ಗ ಹೋಗಿಲ್ಲವಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಧರ್ಮ ಪ್ರೀತಿ ಕಲಿಸಿದೆ ಹೊರತು ದ್ವೇಷವಲ್ಲ :

ಜಗತ್ತಿನಲ್ಲಿ ಇರುವ ಎಲ್ಲ ಧರ್ಮಗಳು ನಮಗೆ ಪ್ರೀತಿಯನ್ನ ಕಲಿಸಿವೆ ಹೊರತು ದ್ವೇಷ ಮಾಡು ಎಂದು ಯಾವ ಧರ್ಮವೂ ಹೇಳಿಲ್ಲ. ಮೂಲಭೂತವಾಗಿ ಇದನ್ನು ಅರ್ಥ ಮಾಡಿಕೊಳ್ಳಬೇಕು. ಜಾತಿ, ಧರ್ಮಗಳನ್ನು ನಾವು ಮಾಡಿದ್ದಲ್ಲ. ಹಿಂದಿನಿಂದಲೂ ಅವು ಬೆಳೆದು ಬಂದಿವೆ. ನಾವೆಲ್ಲರೂ ಮನುಷ್ಯರು. ನಮಗೆ ಕಾಯಿಲೆ, ಶಸ್ತ್ರಚಿಕಿತ್ಸೆಗೆ ರಕ್ತ ಬೇಕಾದಾಗ ಮೊದಲು ರಕ್ತ ಕೊಡಿ ಎನ್ನುತ್ತೇವೆ ವಿನಃ ಅದು ಯಾವ ಜಾತಿಯವರ, ಯಾವ ಧರ್ಮದವರ ರಕ್ತ ಎಂದು ಕೇಳುತ್ತೇವಾ? ಯಾವುದೇ ಧರ್ಮದವರು ಇದ್ದರೂ ಅವರೆಲ್ಲರ ರಕ್ತ ಒಂದೇ ಇರುತ್ತದೆ. ಇದು ಹಿಂದು ರಕ್ತ, ಮುಸ್ಲಿಂ ರಕ್ತ ಬೇರೆ ಬೇರೆ ಇರುತ್ತಾ? ನಾವೆಷ್ಟು ಸ್ವಾರ್ಥಿಗಳು ಎಂದರೆ ಕಾಯಿಲೆ ಬಿದ್ದಾಗ ಯಾರು ಕೊಡುತ್ತಾರೋ ಅವರ ರಕ್ತ ಪಡೆದುಕೊಂಡು ಕಾಯಿಲೆ ವಾಸಿಯಾದ ಬಳಿಕ ನಿಮ್ಮ ಜಾತಿ, ಧರ್ಮ ಯಾವುದು ಎಂದು ಕೇಳುತ್ತೇವೆ. ಇದು ನ್ಯಾಯನಾ? ಧರ್ಮನಾ? ಎಂದು ಸಿದ್ದರಾಮಯ್ಯ ನೆರೆದಿದ್ದ ಜನರನ್ನು ಪ್ರಶ್ನಿಸಿದರು.

ಬಸವಣ್ಣ ದಯವೇ ಧರ್ಮದ ಮೂಲವಯ್ಯ ಎಂದಿದ್ದಾರೆ. ಇದನ್ನು ತಿಳುದುಕೊಂಡರೆ ಸಾಕು. ನಾನೇನು ಅರ್ಜಿ ಹಾಕಿ ಕುರುಬ ಸಮಾಜದಲ್ಲಿ ಹುಟ್ಟುಬೇಕು ಎಂದಿಲ್ಲ. ನಮ್ಮ ಅಪ್ಪ, ಅವ್ವ ಕುರುಬರು ಇದ್ದರು. ನಾನು ಕುರುಬನಾಗಿ ಹುಟ್ಟಿದ್ದೇನೆ. ಪ್ರಾಣಿಗಳನ್ನು ಪ್ರೀತಿಸುತ್ತೇವೆ, ಮನುಷ್ಯರನ್ನ ದ್ವೇಷಿಸುತ್ತೇವೆ ಎಂದು ತಿಳಿಸಿದರು.

ಬಸವಗೋಪಾಲ ನೀಲಮಾಣಿಕ ಮಠದ ದಾಸೋಹರತ್ನ ದಾನೇಶ್ವರರು ಅಧ್ಯಕ್ಷೆ ವಹಿಸಿದ್ದರು. ವೇದಿಕೆಯಲ್ಲಿ ಹಿಂದು, ಮುಸ್ಲಿಂ, ಜೈನ್ ಧರ್ಮಗುರುಗಳು ಇದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ, ಶಾಸಕರಾದ ವಿಜಯಾನಂದ ಕಾಶಪ್ಪನವರ, ಭೀಮಸೇನ ಚಿಮ್ಮನಕಟ್ಟಿ, ಪರಿಷತ್ ಸದಸ್ಯೆ ಉಮಾಶ್ರೀ, ರಾಜ್ಯ ಕೈಗಾರಿಕೆ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮತ್ತಿತರರು ವೇದಿಕೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net