ವಿದೇಶಿಯರ ಉದ್ರಿ ವ್ಯವಹಾರ

16gkn1-a-
Published on

ಗೋಕರ್ಣ: ಅಂಗಡಿಗಳಲ್ಲಿ ಉದ್ರಿ ಮಾಡುವುದು ಮತ್ತು ಉದ್ರಿ ಪಟ್ಟಿ ಇಟ್ಟು ವ್ಯವಹರಿಸುವುದು ನಮ್ಮ ದೇಶದಲ್ಲಿ ಇವತ್ತಿಗೂ ಅನೇಕ ಕಡೆ ನಡೆಯುತ್ತಿದೆ. ಆದರೆ, ಈ ಪದ್ಧತಿ ವಿದೇಶದಲ್ಲಿ ಇಲ್ಲವೇ ಇಲ್ಲ. ಆಶ್ಚರ್ಯವೆಂದರೆ ಲಾಕ್​ಡೌನ್​ನಿಂದಾಗಿ ಗೋಕರ್ಣದಲ್ಲಿರುವ ಕೆಲ ವಿದೇಶಿಯರು ತಮ್ಮ ದೇಶದಲ್ಲಿ ಇಲ್ಲದ ಉದ್ರಿ ವ್ಯವಹಾರಕ್ಕೆ ಗೋಕರ್ಣದಲ್ಲಿ ಅನಿವಾರ್ಯವಾಗಿ ಜೋತು ಬಿದ್ದಿದ್ದಾರೆ. ತಮ್ಮ ಪರಿಚಯದ ಔಷಧ, ಕಿರಾಣಿ ಮತ್ತು ಇತರ ಅಂಗಡಿಗಳಲ್ಲಿ ಉದ್ರಿ ಹಚ್ಚಿಸಿ ದಿನ ದೂಡುವ ಅನಿವಾರ್ಯತೆಗೆ ಸಿಕ್ಕು ಬಿದ್ದಿದ್ದಾರೆ.

ಕಾರ್ಡ್ ಮತ್ತು ನಗದು: ಗೋಕರ್ಣಕ್ಕೆ ಬರುವ ವಿದೇಶಿಯರಲ್ಲಿ ಶೇ.85 ವಿದೇಶಿಯರು ಬೇರೆ ಬೇರೆ ಸಂಸ್ಥೆಯ ಕಾರ್ಡ್ ಬಳಸಿ ತಮ್ಮ ದೈನಂದಿನ ವ್ಯವಹಾರ ಮಾಡುತ್ತಾರೆ. ಆದರೆ, ಗೋಕರ್ಣದ ಎಲ್ಲ ಕಡೆಗಳಲ್ಲಿ ಕಾರ್ಡ್ ನಡೆಯದೇ ಇರುವುದರಿಂದ ಕಾರ್ಡ್ ಇರುವವರು ಸಹ ನಗದು ಹಣವನ್ನು ಅನಿವಾರ್ಯವಾಗಿ ಇಟ್ಟು ಕೊಳ್ಳಬೇಕಾಗುತ್ತದೆ.

ಗೋಕರ್ಣದಲ್ಲಿ ಕಾರ್ಡ್ ನಡೆಯುತ್ತಿಲ್ಲ, ತಮ್ಮ ದೇಶದ ನೋಟು ಕೊಟ್ಟರೆ ಭಾರತೀಯ ರೂಪಾಯಿ ಸಿಗುತ್ತಿಲ್ಲ! ಗೋಕರ್ಣದಲ್ಲಿ ಕಳೆದ ಮಾರ್ಚ್ 25ರಿಂದ ಬಾಗಿಲು ಮುಚ್ಚಿದ ವಿದೇಶಿ ವಿನಿಮಯ ಕೇಂದ್ರ ಇದಕ್ಕೆ ಕಾರಣವಾಗಿದೆ. ಇದರ ಜೊತೆಗೆ ವೆಸ್ಟರ್ನ್ ಯೂನಿಯನ್, ಮನಿಗ್ರಾಂ ನಂತಹ ವಿದೇಶಿ ಕಂಪನಿಗಳು ಸಹ ವಿದೇಶದಿಂದ ಭಾರತಕ್ಕೆ ಹಣ ವರ್ಗಾಯಿಸುವುದನ್ನು ಲಾಕ್​ಡೌನ್​ದೊಂದಿಗೇ ನಿಲ್ಲಿಸಿವೆ. ಇದರಿಂದ ಗೋಕರ್ಣದಲ್ಲಿರುವ ವಿದೇಶಿಯರು ತಮ್ಮ ದೇಶದಿಂದ ಹಣ ವರ್ಗಾಯಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ.

ಗೋಕರ್ಣದಲ್ಲಿ ವಿದೇಶಿಯರ ಪಾಲಿಗೆ ಹಣದ ವಿನಿಮಯ ಅಗತ್ಯ ವಸ್ತುಗಳಲ್ಲೊಂದು. ಇಂತಹ ವಿನಿಮಯ ಕೇಂದ್ರಗಳಲ್ಲಿ ಹೆಚ್ಚಿನವರು ತಮ್ಮ ಕಾರ್ಡ್ ಕೊಟ್ಟು ನಗದು ಪಡೆಯುತ್ತಾರೆ. ಶೇ.15ರಷ್ಟು ಪ್ರವಾಸಿಗರು ಯೂರೊ, ಡಾಲರ್ ಮುಂತಾದ ವಿದೇಶಿ ನೋಟುಗಳನ್ನು ಭಾರತದ ರೂಪಾಯಿಗೆ ಬದಲಿಸಿಕೊಳ್ಳುತ್ತಾರೆ. ಒಂದು ಅಂದಾಜಿನ ಪ್ರಕಾರ ಮೂರು ಕೋಟಿಗೂ ಅಧಿಕ ಹಣ ವಾರ್ಷಿಕವಾಗಿ ಇಲ್ಲಿ ವಿನಿಮಯವಾಗುತ್ತದೆ. ಇದಕ್ಕಾಗಿಯೇ ವಿಶ್ವದ ಖ್ಯಾತ ವಿನಿಮಯ ಸಂಸ್ಥೆಗಳ ಪ್ರತಿನಿಧಿಗಳು ಇಲ್ಲಿದ್ದಾರೆ. ಗೋಕರ್ಣದಲ್ಲಿ ಅಧಿಕೃತವಾಗಿರುವ ಎರಡು ವಿದೇಶಿ ವಿನಿಮಯ ಕೇಂದ್ರದ ಜೊತೆಗೆ ಕೆಲವು ಕಡೆ ಅಗತ್ಯಕ್ಕೆ ಅನುಸಾರವಾಗಿ ವಿದೇಶಿ ವಿನಿಮಯ ಮಾಡಿಕೊಡಲಾಗುತ್ತದೆ. ಆದರೆ, ವಿದೇಶಿ ವಿನಿಮಯವನ್ನೂ ಬಂದ್ ಮಾಡಿ ಕೇಂದ್ರ ಸರ್ಕಾರ ಆದೇಶಿಸಿದೆ. ಹೀಗಾಗಿ ಗೋಕರ್ಣದಲ್ಲಿ ವಿನಿಮಯ ವ್ಯವಹಾರ ಸಂಪೂರ್ಣ ರದ್ದಾಗಿದೆ.

ಗೋಕರ್ಣದಲ್ಲಿನ ವಿದೇಶಿಯರಿಗೆ ವಿನಿಮಯ ಈ ದಿನಗಳಲ್ಲಿ ಅತಿ ಅಗತ್ಯವಾಗಿದೆ. ಆದರೆ ಸರ್ಕಾರದ ಆದೇಶವಿಲ್ಲದೆ ವಿನಿಮಯ ಕೇಂದ್ರಗಳು ಪ್ರಾರಂಭವಾಗಲಾರವು. ಸದ್ಯದಲ್ಲಿಯೇ ಕಾರ್ಡ್ ಬಳಸಿ ನಗದು ನೀಡುವುದು ಆರಂಭವಾಗುವ ಸಾಧ್ಯತೆಯಿದೆ. ಆದರೆ ವಿದೇಶಿ ನೋಟುಗಳ ವಿನಿಮಯ ಸದ್ಯಕ್ಕೆ ಆರಂಭವಾಗುವ ಲಕ್ಷಣಗಳಿಲ್ಲ. | ನಾರಾಯಣ ಪೈ ಅಧಿಕೃತ ವಿದೇಶಿ ಹಣ ವಿನಿಮಯದಾರರು ಗೋಕರ್ಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net