

ಶ್ರೀರಂಗಪಟ್ಟಣ: ಪ್ರಸಿದ್ಧ ಶಕ್ತಿದೇವತೆ ಶ್ರೀನಿಮಿಷಾಂಬ ದೇವಿ ದೇವಾಲಯದಲ್ಲಿ ಮಾಘ ಶುದ್ಧ ಹುಣ್ಣಿಮೆ ಮಹೋತ್ಸವ ಬುಧವಾರ ಸಹಸ್ರಾರು ಭಕ್ತರ ನಡುವೆ ಸಂಭ್ರಮದಿಂದ ನಡೆದಿದ್ದು, ಪ್ರಪ್ರಥಮ ಬಾರಿಗೆ ಶ್ರೀನಿಮಿಷಾಂಬೆಯ ರಥೋತ್ಸವ ಜಿಲ್ಲಾಡಳಿತದಿಂದ ವಿಜೃಂಭಣೆಯಿಂದ ಜರುಗಿತು.
ಪಟ್ಟಣ ಸಮೀಪದ ಗಂಜಾಂನ ದೇವಾಲಯದಲ್ಲಿ ಮಂಗಳವಾರದಿಂದಲೇ ಸಾಕಷ್ಟು ಸಿದ್ಧತೆಗಳನ್ನು ಪ್ರಧಾನ ಅರ್ಚಕ ಸೂರ್ಯನಾರಾಯಣ ಭಟ್ ಅವರ ನೇತೃತ್ವದಲ್ಲಿ ನಡೆಸಿದ್ದು, ಕ್ರೋಧಿ ಸಂವತ್ಸರದ ಉತ್ತರಾಯಣ ಶಿಶಿರ ಶುತು ಮಾಘ ಮಾಸ ಶುಕ್ಲ ಪೌರ್ಣಿಮೆ ಪ್ರಯುಕ್ತ ಬುಧವಾರ ಬೆಳಗಿನ ಜಾವ 1ರಿಂದಲೇ ಅಪೂರ್ವ ಬೀಜಾಕ್ಷರ ಸಹಿತ ಇರುವ ಶ್ರೀನಿಮಿಷಾಂಬೆಗೆ ಪಂಚಾಮೃತ ಅಭಿಷೇಕ ಪೂರ್ವಕ ಮಹಾಭಿಷೇಕ ಸೇವೆ ಅರ್ಪಿಸಿ ವಿವಿಧ ವಿಶೇಷ ಹೂವುಗಳು, ರೇಷ್ಮೆ ವಸ್ತ್ರಗಳು ಹಾಗೂ ಆಭರಣಗಳನ್ನು ತೊಡಿಸಿ ಅಲಂಕರಿಸಿದ್ದು, ಬೆಳಗ್ಗೆ ಗಣಹೋಮ, ನಕ್ಷತ್ರ ಹೋಮ, ದುರ್ಗಾ ಹೋಮ, ಮಹಾಮಂಗಳಾರತಿ ಹಾಗೂ ಸತ್ಯನಾರಾಯಣ ಪೂಜೆ ನಡೆಸಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ದೇವಾಲಯದಲ್ಲಿ ಖುದ್ದು ಜಿಲ್ಲಾಧಿಕಾರಿ ಡಾ.ಕುಮಾರ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ನೇತೃತ್ವದಲ್ಲಿ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ಪುರಸಭಾ ಮುಖ್ಯಾಧಿಕಾರಿ ಎಂ.ರಾಜಣ್ಣ ಹಾಗೂ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸಿ.ಜಿ.ಕೃಷ್ಣ ಬ್ರಾಹ್ಮಿ ಮುಹೂರ್ತದಲ್ಲಿ ವೈದಿಕರೊಂದಿಗೆ ಪೂಜೆಗೆ ಭಾಗಿಯಾಗಿ ಇದೇ ಪ್ರಪ್ರಥಮವಾಗಿ ಕಾಷ್ಟ ರಥದಲ್ಲಿ ಶಕ್ತಿ ದೇವಿಯ ವಿಶೇಷ ಉತ್ಸವ ಮೂರ್ತಿಯನ್ನು ಸಂಪ್ರದಾಯಬದ್ಧ ಪೂಜಾ ಕೈಕಂರ್ಯಗಳ ಬಳಿಕ ಪ್ರತಿಷ್ಠಾಪಿಸಿ ಮುಂಜಾನೆ 5.30ರಲ್ಲಿ ದೇವಾಲಯದ ಅಂಗಳದ 100 ಮೀಟರ್ ವ್ಯಾಪ್ತಿಯಲ್ಲಿ ರಥವನ್ನು ಭಕ್ತರೊಂದಿಗೆ ಮಂಗಳ ವಾದ್ಯಗಳ ಸಮೇತ ಎಳೆದು ಭಕ್ತಿಭಾವ ಸಮರ್ಪಿಸಿದರು.
ಮಾಘ ಶುದ್ಧ ಹುಣ್ಣಿಮೆ ಪ್ರಯುಕ್ತ ಮಂಗಳವಾರ ರಾತ್ರಿಯಿಂದಲೇ ಸಹಸ್ರರಾರು ಸಂಖ್ಯೆಯ ಜನರು ಪಟ್ಟಣಕ್ಕೆ ಆಗಮಿಸಿ ಗಂಜಾಂನ ದೇವಾಲಯ ಮುಂಭಾಗದ ಜೀವನದಿ ಕಾವೇರಿಯಲ್ಲಿ ಮಧ್ಯರಾತ್ರಿಯಿಂದಲೇ ತಂಡೋಪ ತಂಡವಾಗಿ ಪುಣ್ಯ ಸ್ನಾನ ನಡೆಸಿ ಮಧ್ಯರಾತ್ರಿಯಿಂದಲೇ ಶಕ್ತಿ ದೇವಿಯ ದರ್ಶನ ಪಡೆದು ಅನ್ನ ಪ್ರಸಾದ ಸ್ವೀಕರಿಸಿದರು. ದೇವಾಲಯಕ್ಕೆ ಅದ್ದೂರಿಯಾಗಿ ದೀಪಾಲಂಕಾರ, ವಿಶೇಷ ಹೂವಿನ ಅಲಂಕಾರ ನಡೆಸಲಾಗಿದ್ದು, ಹೊರಭಾಗದ ಆವರಣದಲ್ಲಿ ವಿವಿಧ ಕಲಾತಂಡಗಳಿಂದ ಭಕ್ತಿ ಗೀತೆಗಳು, ಭರತನಾಟ್ಯ ಹಾಗೂ ಸಂಗೀತ ವಾದ್ಯಗಳ ಮೇಳಗಳನ್ನು ಕಲಾವಿದರು ನಡೆಸಿಕೊಟ್ಟರು.
ಸುರಕ್ಷತೆ ಕೈಗೊಂಡಿದ್ದ ದೇವಾಲಯ ಆಡಳಿತ: ಮಾಘ ಮಾಸದ ಪುಣ್ಯಸ್ನಾನ ಮಾಡುವ ಭಕ್ತರು ಹಾಗೂ ಜನರ ಸುರಕ್ಷತೆ ದೃಷ್ಟಿಯಿಂದ ದೇವಾಲಯದ ಆಡಳಿತ ಮುಂಜಾಗ್ರತೆಯಾಗಿ ನದಿ ತೀರ ಹಾಗೂ ಒಳಭಾಗದಲ್ಲಿ ಸ್ವಚ್ಛಗೊಳಿಸಿ ಜನರು ಅಪಾಯಕಾರಿ ಸ್ಥಳಗಳಿಗೆ ತೆರಳದಂತೆ ಬ್ಯಾರಿಕೇಡ್ ಅಳವಡಿಸಿ ರಕ್ಷಣೆ ಒದಗಿಸಿತ್ತು. ಇನ್ನು ಮಹಿಳೆಯರು ಮತ್ತು ಮಕ್ಕಳು ಬಟ್ಟೆ ಬದಲಿಸಲು ಸಾಕಷ್ಟು ತಾತ್ಕಾಲಿಕ ಕುಟೀರಗಳು, ದರ್ಶನ ಹಾಗೂ ಪ್ರಸಾದ ವಿತರಣೆ ಮಾಡುವ ಸರತಿ ಸಾಲಿನಲ್ಲಿ ಗೊಂದಲವಾಗದಂತೆ ಸುಗಮ ಸಂಚಾರ ಹಾಗೂ ವಿತರಣೆಗೆ ವ್ಯವಸ್ಥೆ, ಸಾವಿರಾರು ವಾಹನಗಳ ಪಾರ್ಕಿಂಗ್ ಮಾಡಲು ಸ್ಥಳ, ಶೌಚಗೃಹ, ಕುಡಿಯುವ ನೀರು, ಮೊಬೈಲ್ ಆರೋಗ್ಯ ಸುರಕ್ಷತೆ ವಾಹನಗಳು ಸೇರಿದಂತೆ ಸಾಕಷ್ಟು ಕ್ರಮಗಳೊಂದಿಗೆ ಭದ್ರತೆಯಲ್ಲಿ ಅಗ್ನಿಶಾಮಕ, ಪೊಲೀಸರು ಮತ್ತು ದೇವಾಲಯದ ಸಿಬ್ಬಂದಿ ನಿರಂತರವಾಗಿ ಶ್ರಮವಹಿಸಿದರು.