

ಪಿರಿಯಾಪಟ್ಟಣ: ಪಟ್ಟಣದ ಅಧಿದೇವತೆ ಶ್ರೀ ಮಸಣೀಕಮ್ಮನವರ ರಥೋತ್ಸವ ಗುರುವಾರ ಸಹಸ್ರಾರು ಭಕ್ತರ ನಡುವೆ ವಿಜೃಂಭಣೆಯಿಂದ ನಡೆಯಿತು.
ಗುರುವಾರ ಮುಂಜಾನೆಯಿಂದಲೇ ದೇವಾಲಯದಲ್ಲಿರುವ ಮಸಣಿಕಮ್ಮ ಉದ್ಭವ ಮೂರ್ತಿಗೆ ಅಭಿಷೇಕ ನಡೆದವು. ಮಹಿಳೆಯರು ದೇವತೆಯ ಸ್ತುತಿಗಳನ್ನು ಪಠಿಸುವ ಮೂಲಕ ಪೂಜಾ ವಿಧಿವಿಧಾನಗಳಿಗೆ ಚಾಲನೆ ನೀಡಿದರು. ಮುಂಜಾನೆ 5 ಗಂಟೆಯಿಂದಲೇ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಉತ್ಸವ ಮೂರ್ತಿಯನ್ನು ದೇವಾಲಯದಲ್ಲಿ ಪ್ರತಿಷ್ಠಾಪಿಸಿ ಪೂಜಾ ವಿಧಿ ವಿಧಾನಗಳನ್ನು ನಡೆಸಿದ ಬಳಿಕ ಭಕ್ತರು ಉತ್ಸವ ಮೂರ್ತಿಯನ್ನು ಮಂಗಳ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಕೊಂಡೊಯ್ದು ಗಂಗಾ ಪೂಜೆ ನೆರವೇರಿಸಿದರು. ಬಳಿಕ ಉತ್ಸವ ಮೂರ್ತಿಯನ್ನು ಮತ್ತೊಮ್ಮೆ ದೇವಾಲಯಕ್ಕೆ ತಂದು ಮಹಾಮಂಗಳಾರತಿ ನೆರವೇರಿಸಿ ದೇವಾಲಯದ ಸುತ್ತಲೂ ಪ್ರದಕ್ಷಿಣೆ ನಡೆಸಲಾಯಿತು. ನಂತರ ಉತ್ಸವ ಮೂರ್ತಿಯನ್ನು ಮಸಣಿಕೇರಿಯ ಮೂಲಕ ಮೆರವಣಿಗೆಯಲ್ಲಿ ತಂದು ಪುಷ್ಪಾಲಂಕಾರಗಳಿಂದ ಅಲಂಕೃತಗೊಂಡಿದ್ದ ರಥದ ಬಳಿ ತಂದು ರಥ ಪ್ರದಕ್ಷಿಣೆ ನಡೆಸಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಭಕ್ತರು ಹಣ್ಣು-ಜವನ ಎಸೆದರು. ದೇವಿಗೆ ಮಹಾಮಂಗಳಾರತಿ ನೆರವೇರಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ಜೈಕಾರ ಕೂಗುತ್ತಾ ರಥವನ್ನು ಎಳೆದರು. ದೇವಾಲಯದ ಮುಂಭಾಗದ ರಥ ಬೀದಿಯಲ್ಲಿ ತೆರಳಿದ ರಥದ ಮೆರವಣಿಗೆಯು ಪುರಸಭೆ ವಾಣಿಜ್ಯ ಮಳಿಗೆಯ ಮುಂಭಾಗದ ಬಿ.ಎಂ. ರಸ್ತೆಯವರೆಗೆ ತಂದು ರಥವನ್ನು ನಿಲ್ಲಿಸಲಾಯಿತು.
ಮಾಜಿ ಶಾಸಕ ಕೆ.ಮಹದೇವ್, ತಹಸೀಲ್ದಾರ್ ನಿಸರ್ಗಪ್ರಿಯ, ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ.ಪ್ರಸನ್ನ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಪುರಸಭೆ ಅಧ್ಯಕ್ಷ ಪ್ರಕಾಶ್ ಸಿಂಗ್, ಪುರಸಭೆ ಮಾಜಿ ಅಧ್ಯಕ್ಷ ಕೆ.ಮಹೇಶ್, ಮಂಜುನಾಥ್ ಸಿಂಗ್, ಪುರಸಭಾ ಸದಸ್ಯರಾದ ಪಿ.ಸಿ.ಕೃಷ್ಣ, ನಿರಂಜನ್, ಎಚ್.ಕೆ.ಮಂಜುನಾಥ್, ಚಾಮರಾಜ್, ಪ್ರಕಾಶ್ ಇದ್ದರು.
ಪ್ರಸಾದ ವಿತರಣೆ: ಬೆಳಗ್ಗೆಯಿಂದಲೂ ಭಕ್ತರು ಕುಟುಂಬ ಸಮೇತ ಆಗಮಿಸಿ ದೇವಿ ದರ್ಶನ ಪಡೆದರು. ದೇವಾಲಯದ ಬಳಿ, ಪಟ್ಟಣದ ಬಿ.ಎಂ. ರಸ್ತೆಯ ಹಲವೆಡೆ ವಿವಿಧ ಭಕ್ತ ಮಂಡಳಿಗಳ ವತಿಯಿಂದ ಕುಡಿಯುವ ನೀರಿನ ಬಾಟಲ್‌ಗಳು, ಮಜ್ಜಿಗೆ, ಲಸ್ಸಿ, ಪಾನಕ, ತಂಪು ಪಾನೀಯ, ಹಣ್ಣಿನ ಶರಬತ್ತು, ಕಲ್ಲಂಗಡಿ ಹಣ್ಣು ವಿತರಿಸಲಾಯಿತು. ಸಂತೆಪೇಟೆಯಿಂದ ಬಸ್ ನಿಲ್ದಾಣದವರೆಗೂ ಬಿ.ಎಂ. ರಸ್ತೆಯ ಎರಡೂ ಬದಿಯಲ್ಲಿ ಸುಮಾರು 30ಕ್ಕೂ ಹೆಚ್ಚು ಕಡೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಅನ್ನದಾನ ಮಾಡಲಾಯಿತು.
ಸಚಿವ ಕೆ.ವೆಂಕಟೇಶ್ ಅವರ ಪುತ್ರ ಹಾಗೂ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಕಾಂಗ್ರೆಸ್ ಮುಖಂಡರೊಂದಿಗೆ ಸೇರಿ ಪ್ರಸಾದ ವಿತರಣೆಯಲ್ಲಿ ಮುಂದಾಗಿದ್ದರು. ಅವರೊಂದಿಗೆ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಆರ್.ನಿರೂಪಾ, ಮುಖಂಡರಾದ ಲೋಹಿತ್, ಸಚಿನ್, ರಘು, ಮಹೇಶ್ ಇದ್ದರು.
ಜನಸಾಗರ: ರಾಜ್ಯದ ವಿವಿಧೆಡೆಗಳಿಂದ ಭಕ್ತರು ಆಗಮಿಸಿದ್ದರು. ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಿಂದ ಪೊಲೀಸ್ ಠಾಣೆಯವರೆಗೂ ಜನ ಜಂಗುಳಿ ಕಂಡು ಬಂತು. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸ್ ಇನ್‌ಸ್ಪೆಕ್ಟರ್ ಗೋವಿಂದರಾಜು ಮತ್ತು ಸಬ್ ಇನ್‌ಸ್ಪೆಕ್ಟರ್‌ಗಳ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಸಂತೆಪೇಟೆಯಲ್ಲಿನ ಬಿ.ಎಂ.ರಸ್ತೆಯಲ್ಲಿ ಒಂದು ಬದಿಯನ್ನು ಸಾರ್ವಜನಿಕ ಓಡಾಟಕ್ಕೆ ಸೀಮಿತಗೊಳಿಸಿ ಮತ್ತೊಂದು ಬದಿಯಲ್ಲಿ ಡಿವೈಡರ್ ಹಾಕಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗದಂತೆ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿತ್ತು.
ಮಂಗಳೂರು, ಮಡಿಕೇರಿ, ಕುಶಾಲನಗರ ಕಡೆಗಳಿಂದ ಮೈಸೂರು ಕಡೆಗೆ ತೆರಳುವ ಮತ್ತು ಮೈಸೂರಿನಿಂದ ಹಿಂದಿರುಗುವ ವಾಹನಗಳು ಪಟ್ಟಣದೊಳಗೆ ಹಾದು ಹೋಗಲು ಪರದಾಡಿದವು. ಇದರಿಂದಾಗಿ ಪಟ್ಟಣದ ಹೊರಭಾಗದವರೆಗೂ ಬಿ.ಎಂ. ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು. ಸಂಜೆಯ ಬಳಿಕವೂ ಜಾತ್ರೆಗೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗಿತ್ತು.