

ತಿ.ನರಸೀಪುರ: ತಾಲೂಕಿನ ಮಾದಾಪುರ ಗ್ರಾಮದಲ್ಲಿ ಬುಧವಾರ ಶ್ರೀ ಮರುಡೇಶ್ವರಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಶ್ರೀ ಗಣಪತಿ, ಶ್ರೀ ಸುಬ್ರಹ್ಮಣೇಶ್ವರ ಹಾಗೂ ಶ್ರೀ ಮರುಡೇಶ್ವರ ರಥೋತ್ಸವವು ದೇವಸ್ಥಾನದ ಮುಂಭಾಗದಲ್ಲಿರುವ ರಥದ ಬೀದಿಯಲ್ಲಿ ಸಾವಿರಾರು ಭಕ್ತರ ಜೈಕಾರದೊಡನೆ ಮಂಗಳವಾದ್ಯ, ವೀರಗಾಸೆಯೊಂದಿಗೆ ತೇರುಗಳು ಸಾಗಿದವು.
ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್, ಉಪ ತಹಸೀಲ್ದಾರ್ ಕುಮಾರ್ ಉಪಸ್ಥಿತಿಯಲ್ಲಿ ರಥೋತ್ಸವಕ್ಕೆ ಮಧ್ಯಾಹ್ನ 2 ಗಂಟೆಗೆ ಚಾಲನೆ ನೀಡಲಾಯಿತು. ಪೊಲೀಸ್ ಇಲಾಖೆಯಿಂದ ಅಗತ್ಯ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ನಾಲ್ಕು ದಿನಗಳ ಜಾತ್ರಾ ಮಹೋತ್ಸವದಲ್ಲಿ ರಥೋತ್ಸವವು ಪ್ರಮುಖ ಆಕರ್ಷಣೆಯಾಗಿತ್ತು. ಸುತ್ತ್ತಲಿನ ಹತ್ತಾರು ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಜಾತ್ರೋತ್ಸವ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಮರುಡೇಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ ನಡೆಯಿತು. ಬಳಿಕ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಬಿಸಿಲನ್ನು ಲೆಕ್ಕಿಸದೆ ಆಗಮಿಸಿದ್ದ ಭಕ್ತರು ಹಣ್ಣು ದವನವನ್ನು ರಥಗಳಿಗೆ ಎಸೆದರು ಭಕ್ತಿ ಸಮರ್ಪಿಸಿದರು. ಸೇವಾರ್ಥದಾರರು ಮಜ್ಜಿಗೆ, ಪಾನಕ ಹಾಗೂ ಕೋಸಂಬರಿ ವಿತರಿಸಿದರು.