ವಿಜೃಂಭಣೆಯ ಬೆಟ್ಟಳ್ಳಿ ಮಾರಮ್ಮ ರಥೋತ್ಸವ

25 HANUR 1
Published on

ಹನೂರು: ಪಟ್ಟಣದ ಶ್ರೀಬೆಟ್ಟಳ್ಳಿ ಮಾರಮ್ಮನ ಜಾತ್ರೋತ್ಸವದಲ್ಲಿ ಸೋಮವಾರ ರಾತ್ರಿ ಭಕ್ತರು ದೇಗುಲಕ್ಕೆ ಜಾಗರ ಸಮರ್ಪಿಸಿದರೆ, ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

ನಾಲ್ಕು ದಿನಗಳ ಕಾಲ ನಡೆಯುವ ಜಾತ್ರೆಯ ಹಿನ್ನೆಲೆಯಲ್ಲಿ ದೇಗುಲವನ್ನು ತಳಿರು-ತೋರಣ, ವಿವಿಧ ಪುಷ್ಪ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತಲ್ಲದೆ, ಪ್ರತಿ ಬಡಾವಣೆಯನ್ನು ದೀಪಾಲಂಕಾರ ಮಾಡಲಾಗಿತ್ತು. ಬಸ್ ನಿಲ್ದಾಣದ ಬಳಿ ಮಾರಮ್ಮ ದೇವಿ ಭಾವಚಿತ್ರವನ್ನು ಹೋಲುವ ವಿದ್ಯುತ್ ದೀಪದಿಂದ ಝಗಮಗಿಸುವ 50 ಅಡಿ ಎತ್ತರದ ಕಟೌಟ್ ಅಳವಡಿಸಲಾಗಿತ್ತು.

ಸೋಮವಾರ ಭಕ್ತರು ತಮ್ಮ ಮನೆಗಳಲ್ಲಿ ಒಂದು ವಾರದಿಂದ ನೀರುಣಿಸಿ ಬೆಳೆಸಿದ ಧಾನ್ಯಗಳ ಪೈರುಗಳಿಗೆ (ಜಾಗರ) ವಿಶೇಷ ಪೂಜೆ ಸಲ್ಲಿಸಿದರು. ರಾತ್ರಿ 10ರ ವೇಳೆಯಲ್ಲಿ ಸೊಪ್ಪಿನಕೇರಿ, ಬನ್ನಿಮಂಟಪ, ಮಾರುತಿ ನಗರ ಹಾಗೂ ಪಟ್ಟಣದ ಇನ್ನಿತರ ಬಡಾವಣೆಗಳಿಂದ ಜಾಗರವನ್ನು ಹೊತ್ತ ಹೆಣ್ಣು ಮಕ್ಕಳು ಹಾಗೂ ಮಹಿಳೆಯರು ವಾದ್ಯ ಮೇಳಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ದೇಗುಲಕ್ಕೆ ಆಗಮಿಸಿ ಭಕ್ತಿ ಭಾವದಿಂದ ದೇವಿಗೆ ಜಾಗರವನ್ನು ಸಮರ್ಪಿಸಲಾಯಿತು. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇಗುಲದ ಮುಂಭಾಗದ ನೆರೆದಿದ್ದರು. ಯುವಕರು ವಾದ್ಯದ ತಾಳಕ್ಕೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ವಿಜೃಂಭಣೆಯ ರಥೋತ್ಸವ: ರಥೋತ್ಸವದ ಹಿನ್ನೆಲೆಯಲ್ಲಿ ಬೆಳಗ್ಗೆ 5ರ ವೇಳೆಯಲ್ಲಿ ದೇಗುಲದಲ್ಲಿ ದೇವಿಯ ಮೂರ್ತಿಗೆ ಹಾಲು, ಮೊಸರು, ಎಳನೀರು, ಪನ್ನೀರು, ಗಂಧ, ಅರಿಶಿಣ ಹಾಗೂ ಕುಂಕುಮ ಅಭಿಷೇಕವನ್ನು ನೆರವೇರಿಸಲಾಯಿತು. ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ ಮಹಾ ಮಂಗಳಾರತಿ ಬೆಳಗಿಸಲಾಯಿತು. ಬಳಿಕ ದೇವಿಯ ಉತ್ಸವ ಮೂರ್ತಿಯನ್ನು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿ ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿದ್ದ ತೇರಿನಲ್ಲಿ ಕೂರಿಸಲಾಯಿತು. ಈ ವೇಳೆ 101 ನಿಂಬೆಹಣ್ಣು ಹಾಗೂ ತೆಂಗಿನಕಾಯಿಯ ಸೇವೆಯನ್ನು ನೆರವೇರಿಸಿ ಸಿಹಿ ನೈವೇದ್ಯ ಅರ್ಪಿಸಲಾಯಿತು. ಮಧ್ಯಾಹ್ನ 12ರ ವೇಳೆಯಲ್ಲಿ ಗರುಡವೊಂದು ತೇರನ್ನು ಪ್ರದಕ್ಷಿಣೆ ಹಾಕಿದ ಬಳಿಕ ದೇಗುಲದ ಪ್ರಧಾನ ಅರ್ಚಕ ರಾಜೋಜಿರಾವ್ ಸಿಂಧೆ ಅವರ ಸಮ್ಮುಖದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ತೇರನ್ನು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ಈ ವೇಳೆ ಭಕ್ತರು ಜಯಘೋಷವನ್ನು ಮೊಳಗಿಸುತ್ತಾ ತೇರನ್ನು ಎಳೆದರು. ಹರಕೆ ಹೊತ್ತ ಭಕ್ತರು ಧನ, ಧಾನ್ಯವನ್ನು ಎಸೆದು ಇಷ್ಟಾರ್ಥಕ್ಕಾಗಿ ಪ್ರಾರ್ಥಿಸಿದರು.

ತಂಪುಜ್ಯೋತಿ ಅರ್ಪಣೆ: ಮಂಗಳವಾರ ತಂಪುಜ್ಯೋತಿ (ತಂಬಿಟ್ಟು) ಸೇವೆಯು ನಡೆಯಿತು. ಪಟ್ಟಣದ ಪ್ರತಿ ಮನೆಯಿಂದ ತಯಾರಿಸಿದ ತಂಪುಜ್ಯೋತಿಯನ್ನು ದೇಗುಲಕ್ಕೆ ತಂದು ವಿಶೇಷ ಪೂಜೆ ಸಲ್ಲಿಸಿ ದೇವಿಗೆ ಸಮರ್ಪಿಸಲಾಯಿತು. ಬೆಳಗಿನಿಂದಲೇ ಆರಂಭವಾದ ತಂಪುಜ್ಯೋತಿ ಅರ್ಪಣೆ ಸಂಜೆಯವರೆಗೂ ನಡೆಯಿತು. ಆಗಮಿಸಿದ ಭಕ್ತರು ದೇಗುಲದ ಮುಂಭಾಗ ಧೂಪ ಹಾಕಿ ಹಣ್ಣು, ಕಾಯಿ ನೀಡಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಹರಕೆ ಹೊತ್ತ ಭಕ್ತರು ದೇಗುಲದ ಮುಂಭಾಗ ಉಪ್ಪು ಸುರಿದರು, ಈಡುಗಾಯಿ ಒಡೆದರು. ಕೆಲ ಭಕ್ತರು ದೇವಿಗೆ ಹರಕೆ ಕಾಣಿಕೆಯನ್ನು ಸಲ್ಲಿಸಿದರು.

ಜಾತ್ರೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಡಿವೈಎಸ್ಪಿ ಧರ್ಮೇಂದ್ರ ನೇತೃತ್ವದಲ್ಲಿ ದೇಗುಲ ಸೇರಿದಂತೆ ಪಟ್ಟಣದ ಜನಸಂದಣಿ ಸ್ಥಳಗಳಲ್ಲಿ ಸೂಕ್ತ ಬಂದೋಬಸ್ತ್ ಒದಗಿಸಲಾಗಿತ್ತು. ದೇಗುಲದ ವತಿಯಿಂದ ನಿರಂತರ ದಾಸೋಹ ವ್ಯವಸ್ಥೆ ಏರ್ಪಡಿಸಲಾಗಿತ್ತು.

ಇಂದು ಬಾಯಿಬೀಗ: ಜಾತ್ರೋತ್ಸವದ ಹಿನ್ನೆಲೆಯಲ್ಲಿ ಬುಧವಾರ ಬಾಯಿಬೀಗ ಸೇವೆ ನಡೆಯಲಿದ್ದು, ಈ ಬಾರಿ ಹರಕೆ ಹೊತ್ತ 102 ಭಕ್ತರು ಸುಮಾರು 25 ಅಡಿ ಉದ್ದದ ಕಬ್ಬಿಣದ ಸರಳಿನಿಂದ ಬಾಯಿಬೀಗ ಹಾಕಿಸಿಕೊಂಡು ಪಟ್ಟಣದ ಆಂಜನೇಯಸ್ವಾಮಿ ದೇಗುಲದಿಂದ ಶ್ರೀಬೆಟ್ಟಳ್ಳಿ ಮಾರಮ್ಮ ದೇಗುಲಕ್ಕೆ ಮೆರವಣಿಗೆಯ ಮೂಲಕ ಆಗಮಿಸಲಿದ್ದಾರೆ. ಹಾಗಾಗಿ ಈ ವೇಳೆ ಸಾವಿರಾರು ಭಕ್ತರು ಭಾಗಿಯಾಗಲಿದ್ದಾರೆ. ಜತೆಗೆ ಮನೆಗಳಲ್ಲಿ ಬಾಡೂಟದ ಆತಿಥ್ಯ ಇರುವುದರಿಂದ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಜನರು ಪಟ್ಟಣಕ್ಕೆ ಆಗಮಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net