

ಗುಂಡ್ಲುಪೇಟೆ: ತಾಲೂಕಿನ ಕೊಡಸೋಗೆ ಗ್ರಾಮದಲ್ಲಿ ಚೆಲುವನಾರಾಯಣಸ್ವಾಮಿ ತುಳಸಿ ಕಲ್ಯಾಣೋತ್ಸವ ವಿಜೃಂಭಣೆಯಿಂದ ನೆರವೇರಿತು.
ಈ ಅಂಗವಾಗಿ ಗ್ರಾಮದ ಚೆಲುವನಾರಾಯಣಸ್ವಾಮಿ ದೇವಾಲಯ ಹಾಗೂ ರಸ್ತೆಗಳ ಬದಿಗಳಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಮಂಗಳವಾರ ರಾತ್ರಿ ಚೆಲುವನಾರಾಯಣಸ್ವಾಮಿ ಮತ್ತು ತುಳಸಿಯ ಉತ್ಸವ ಮೂರ್ತಿಗಳನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಮಾದಲವಾಡಿಯ ಶ್ರೀನಿವಾಸ್ ನೇತೃತ್ವದಲ್ಲಿ ಆಹೋರಾತ್ರಿ ಕಲ್ಯಾಣೋತ್ಸವ ಮುಂತಾದ ಪೂಜಾಕೈಂಕರ್ಯಗಳನ್ನು ನಡೆಸಲಾಯಿತು. ಚೆಲುವನಾರಾಯಣಸ್ವಾಮಿ ಮತ್ತು ತುಳಸಿಯವರ ಉತ್ಸವ ಮೂರ್ತಿಗಳನ್ನು ಮತ್ತೊಮ್ಮೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದ ನಂತರ ಕಲ್ಯಾಣೋತ್ಸವ ಸಂಪನ್ನಗೊಂಡಿತು.