

ಸರಗೂರು: ತಾಲೂಕಿನ ಕುಂದೂರು ಗ್ರಾಮದಲ್ಲಿ ಮಂಗಳವಾರ ಶ್ರೀ ಚಿಕ್ಕದೇವಮ್ಮನ ಜಾತ್ರೆ ವಿಜೃಂಭಣೆಯಿಂದ ನಡೆಯಿತು.
ದೇವಸ್ಥಾನವನ್ನು ವಿವಿಧ ಬಗೆಯ ಬಣ್ಣಗಳಿಂದ ಸಿಂಗರಿಸಲಾಗಿತ್ತು. ಚಿಕ್ಕದೇವಮ್ಮನ ಬೆಟ್ಟದಿಂದ ದೇವರನ್ನು ಕುಂದೂರು ಗ್ರಾಮಕ್ಕೆ ತರಲಾಯಿತು. ಸೋಮವಾರ ಮುಂಜಾನೆ ದೇವಸ್ಥಾನದ ಜಾತ್ರೆ ಮಾಳ ಸಮೀಪದಲ್ಲಿಯೇ ಬೀಜಾಸುರನ ಸಂಹಾರ ಮಾಡಲಾಯಿತು. ನಂತರ ವಿಜಯೋತ್ಸವ ಆಚರಿಸಲಾಯಿತು. ಬಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಚಿಕ್ಕದೇವಮ್ಮನವರ ಮೂರ್ತಿಯನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕಾರಗೊಳಿಸಲಾಗಿತ್ತು. ಸರತಿ ಸಾಲಿನಲ್ಲಿ ಭಕ್ತರು ನಿಂತು ದೇವರ ದರ್ಶನ ಪಡೆದು ಹರಕೆ ತೀರಿಸಿದರು. ಜಾತ್ರೆ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟು ತೆರೆದಿದ್ದವು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸರಗೂರು ಪೊಲೀಸರು ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಆರೋಗ್ಯ ಇಲಾಖೆಯಿಂದ ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆಯಲಾಗಿತ್ತು. ಕಲ್ಲಂಬಾಳು ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು, ಚಿಕ್ಕದೇವಮ್ಮನ ಬೆಟ್ಟದ ಆರ್ಚಕರು, ಕುಂದೂರು, ದಡದಹಳ್ಳಿ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಚಿಕ್ಕದೇವಮ್ಮನ ಬೆಟ್ಟದ ಇಒ ರಘು, ದೇವಸ್ಥಾನದ ಪಾರುಪತ್ತೇದಾರ ಶಾಂತಿಪುರ ಮಹದೇವಸ್ವಾಮಿ, ತಹಸೀಲ್ದಾರ್ ಮೋಹನಕುಮಾರಿ, ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್, ಸಿ.ಕೆ.ಗಿರೀಶ್, ಕುಂದೂರು ಮೂರ್ತಿ, ಮಹದೇವ್, ಚಿನ್ನಸ್ವಾಮಿ, ಶಿವಕುಮಾರ್, ಪಿಎಸ್‌ಐ ಗೋಪಾಲ್, ಉಮೇಶ್ ಇದ್ದರು.