

ಎಚ್.ಡಿ.ಕೋಟೆ: ಮನುಷ್ಯನ ಬಾಯಿ ದೈಹಿಕ ಆರೋಗ್ಯಕ್ಕೆ ಕನ್ನಡಿ ಇದ್ದಂತೆ ಎಂದು ಸಾರ್ವಜನಿಕ ಆಸ್ಪತ್ರೆ ದಂತ ತಜ್ಞ ಡಾ.ಸಮೀವುಲ್ಲಾ ಷರೀಫ್ ತಿಳಿಸಿದರು.
ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಗುರುವಾರ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮತ್ತು ಸಾರ್ವಜನಿಕ ಆಸ್ಪತ್ರೆ ವತಿಯಿಂದ ಹಮ್ಮಿಕೊಂಡಿದ್ದ ಬಾಯಿ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅನೇಕ ಕಾಯಿಲೆಗಳ ರೋಗ ಲಕ್ಷಣಗಳು ಮೊದಲಿಗೆ ಬಾಯಲ್ಲಿ ಕಾಣಿಸಿಕೊಳ್ಳುತ್ತವೆ. ಒಬ್ಬ ವ್ಯಕ್ತಿಯ ಬಾಯಿಯನ್ನು ಪರೀಕ್ಷಿಸಿ ಅವನು ಎಷ್ಟು ಆರೋಗ್ಯಕರವಾಗಿದ್ದಾನೆ ಎಂದು ಗುರುತಿಸಬಹುದು. ನಾವು ಸೇವಿಸುವ ಆಹಾರವು ಎಷ್ಟೇ ಶುಚಿಯಾಗಿದ್ದರೂ ನಮ್ಮ ಬಾಯಿ ಆರೋಗ್ಯಕರವಾಗಿಲ್ಲದಿದ್ದರೆ ಅನೇಕ ಕಾಯಿಲೆಗಳು ಬರುವ ಸಂಭವವಿರುತ್ತದೆ. ಹಾಗಾಗಿ ಬಾಯಿ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಿರಿಯ ವೈದ್ಯಾಧಿಕಾರಿ ಡಾ.ಸೋಮಣ್ಣ ಮಾತನಾಡಿ, ದೇಹದ ಭಾಗಗಳನ್ನು ಸ್ವಚ್ಛವಾಗಿ ಇಡುವಂತೆ ಬಾಯಿಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ಮಾತನಾಡಿ, ದಿನನಿತ್ಯ ದೇಹವನ್ನು ಸ್ವಚ್ಛಗೊಳಿಸುವ ಹಾಗೆ ದಂತವನ್ನು ದಿನಕ್ಕೆ ಎರಡು ಬಾರಿ ಸ್ವಚ್ಛಗೊಳಿಸಬೇಕು ಎಂದು ತಿಳಿಸಿದರು.
ಆಡಳಿತ ವೈದ್ಯಾಧಿಕಾರಿ ಡಾ.ಶ್ರೀನಿವಾಸ್, ಮೋಹನ್, ಕಚೇರಿ ಅಧೀಕ್ಷಕಿ ತಾರಾದೇವಿ, ಶುಶ್ರೂಷಕ ಮೇಲ್ವಿಚಾರಕಿ ಪರಿಮಳಾ ಗಾಳಂಕಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಟಿ.ರವಿರಾಜ್, ಅರಲಪ್ಪ, ಶುಶ್ರೂಷಕ ಅಧಿಕಾರಿಗಳಾದ ಸರೋಜಿನಿ, ಸುನೀತಾ, ಕಲಾವತಿ, ಸಿಬ್ಬಂದಿ ಇದ್ದರು.