ವಿ.ಎಸ್.ಪಾಟೀಲರ ಎನ್ ಡಬ್ಲ್ಯು ಕೆಆರ್ ಟಿಸಿ ಅಧ್ಯಕ್ಷ ಹುದ್ದೆಗೆ ಕೋಕ್

IMG-20220824-WA0012.jpg
Published on

ಉತ್ತರ ಕನ್ನಡ: ಕಾಂಗ್ರೇಸ್ ಸೇರ ಬಯಸಿದ ಎನ್ ಡಬ್ಲ್ಯುಕೆಆರ್ ಟಿಸಿ ಅಧ್ಯಕ್ಷ ವಿ.ಎಸ್.ಪಾಟೀಲ ಅವರನ್ನು ಆ ಹುದ್ದೆಯಿಂದ ಕೆಳಗಿಳಿಸಲಾಗಿದೆ.
ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಪುಷ್ಪಾ ಅವರು  ವಿ.ಎಸ್. ಪಾಟೀಲ ಅವರ ನಾಮ ನಿರ್ದೇಶನ ರದ್ದು ಮಾಡಿ ಬುಧವಾರ ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ಬಿಜೆಪಿಯಿಂದ ಯಲ್ಲಾಪುರ ಕ್ಷೇತ್ರದಿಂದ ಶಾಸಕರಾಗಿದ್ದ ವಿ.ಎಸ್.ಪಾಟೀಲ 2018 ರ ಚುನಾವಣೆಯಲ್ಲಿ ಅದೇ ಪಕ್ಷದಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಶಿವರಾಮ ಹೆಬ್ಬಾರ ವಿರುದ್ಧ ಸೋಲು ಕಂಡಿದ್ದರು.
ಬದಲಾದ ಪರಿಸ್ಥಿತಿಯಲ್ಲಿ ಶಿವರಾಮ‌ ಹೆಬ್ಬಾರ ಬಿಜೆಪಿ ಸೇರಿ ಸಚಿವರಾದರು. ಉಪ ಚುನಾವಣೆಯಲ್ಲಿ ಬಿಜೆಪಿ ಯಲ್ಲಾಪುರ ಕ್ಷೇತ್ರದ  ಅಭ್ಯರ್ಥಿಯಾಗಿ ಸ್ಪರ್ಧಿಸಿ  ಗೆಲುವು ಕಂಡಿದ್ದರು‌.
ಹೆಬ್ಬಾರ ಬಿಜೆಪಿ ಆಗಮನದಿಂದ ಮೂಲ ಬಿಜೆಪಿಗ ವಿ.ಎಸ್.ಹೆಬ್ಬಾರ ಮೂಲೆಗುಂಪಾಗಿದ್ದರು. ಕ್ಷೇತ್ರ ತ್ಯಾಗಕ್ಕಾಗಿ ವಿ.ಎಸ್.ಪಾಟೀಲರಿಗೆ ಎನ್ ಡಬ್ಲ್ಯುಕೆಆರ್ ಟಿಸಿ ಅಧ್ಯಕ್ಷ ಸ್ಥಾನ ಸಿಕ್ಕಿತ್ತಾದರೂ ಅವರಿಗೆ ಅದರಲ್ಲಿ ಸಮಾಧಾನ ಇರಲಿಲ್ಲ.
ಸಚಿವ ಶಿವರಾಮ ಹೆಬ್ಬಾರ ತಮ್ಮನ್ನು ಕಡೆಗಣಿಸುತ್ತಿದ್ದಾರೆ. ತಮ್ಮದೇ ಸರ್ಕಾರವಿದ್ದರೂ ತಾವು ಹೇಳಿದ ಯಾವ ಕೆಲಸವೂ ಆಗುತ್ತಿಲ್ಲ. ಎಂಬ ಕೊರಗು ಪಾಟೀಲ ಅವರದ್ದು. ಇದರಿಂದ ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು  ಭೇಟಿಯಾಗಿ ತಾವು ಕಾಂಗ್ರೆಸ್ ಸೇರುವ ವಿಚಾರ ಚರ್ಚಿಸಿದ್ದರು. ಹೆಬ್ಬಾರರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಪರಿಣಾಮ ಸರ್ಕಾರ ಅವರನ್ನು ನಿಗಮದ ಹುದ್ದೆಯಿಂದ ಕೆಳಗಿಳಿಸಿದೆ.

ವಿ.ಎಸ್. ಪಾಟೀಲ ಮುಂಬರುವ ಚುನಾವಣೆಯಲ್ಲಿ ಯಲ್ಲಾಪುರ ಕ್ಷೇತ್ರದಿಂದ‌ ಕಾಂಗ್ರೆಸ್ ಅಭ್ಯರ್ಥಿಯಾಗಬಯಸಿದ್ದು, ಶಿವರಾಮ ಹೆಬ್ಬಾರರನ್ನು ಎದುರಿಸಲು ಸಜ್ಜಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net