

ವಿಜಯವಾಣಿ ಸುದ್ದಿಜಾಲ ಕಾರವಾರ
ಮಾಜಿ ಶಾಸಕ, ಎನ್‌ಡಬ್ಲುಕೆಆರ್‌ಟಿಸಿ ಮಾಜಿ ಅಧ್ಯಕ್ಷ ವಿ.ಎಸ್.ಪಾಟೀಲ ಹಾಗೂ ಶ್ರೀನಿವಾಸ ಭಟ್ ಧಾತ್ರಿ ಗುರುವಾರ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಯಲ್ಲಾಪುರ ಕ್ಷೇತ್ರದಲ್ಲಿ ಮುಂಬರುವ ಚುನಾವಣೆಗೆ ಸಚಿವ ಶಿವರಾಮ ಹೆಬ್ಬಾರ ಅವರಿಗೆ ಅಧಿಕೃತ ಪ್ರತಿಸ್ಪರ್ಧಿ ಸಜ್ಜಾಗಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹಾಗೂ ಹಿರಿಯ ಮುಖಂಡ ಆರ್.ವಿ. ದೇಶಪಾಂಡೆ ಅವರು ಪಕ್ಷದ ಧ್ವಜ ನೀಡುವ ಮೂಲಕ ವಿ.ಎಸ್. ಪಾಟೀಲ ಹಾಗೂ ಶ್ರೀನಿವಾಸ್ ಭಟ್ ಧಾತ್ರಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂಧರ್ಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಪಾಟೀಲ ಅವರ ತಂದೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಇವರೂ ಕೂಡ ಪಕ್ಷದ ವಿವಿಧ ಸಂಘಟನೆಗಳಲ್ಲಿ ಕೆಲಸ ಮಾಡಿದ್ದರು. ಮಧ್ಯೆ ಬಿಜೆಪಿ ಸೇರಿ ಶಾಸಕರಾಗಿದ್ದರು. ನಮ್ಮ ಜತೆ ವಿಧಾನಸಭೆಯಲ್ಲಿ ಕೆಲಸ ಮಾಡಿದ್ದಾರೆ. ಅಬ್ದುಲ್ ಕಲಾಂ ಅವರು ರಾಷ್ಟ್ರಪತಿ ಆಗಿದ್ದ ಸಂದರ್ಭದಲ್ಲಿ ಇವರಿಗೆ ಅತ್ಯುತ್ತಮ ಶಾಸಕ ಎಂಬ ಪ್ರಶಸ್ತಿ ನೀಡಿ, ಗೌರವಿಸಿದ್ದರು ಎಂದು ಪಾಟೀಲ ಅವರ ಗುಣಗಾನ ಮಾಡಿದರು. ಶ್ರೀನಿವಾಸ ಭಟ್ ಅವರೂ ವಿವಿಧ ಸಂಘಟನೆಗಳಲ್ಲಿ ಕೆಲಸ ಮಾಡಿದ್ದು, ಉತ್ತಮ ಸಂಘಟಕರು ಎಂದರು.
ಇನ್ನಿಬ್ಬರು ಸೇರ್ಪಡೆ:
ಆಪರೇಷನ್ ಕಮಲದಲ್ಲಿ ನಮ್ಮ ಶಾಸಕರು ಹೋದ ನಂತರ ಆಯಾ ಕ್ಷೇತ್ರದ ಬಹುತೇಕ ಬಿಜೆಪಿ ನಾಯಕರು ನಮ್ಮ ಪಕ್ಷಕ್ಕೆ ಒಬ್ಬೊಬ್ಬರಾಗಿ ಬರುತ್ತಿದ್ದಾರೆ. ಇತ್ತೀಚೆಗೆ ಹಿರೇಕೆರೂರು ನಾಯಕರು ಸೇರ್ಪಡೆಯಾಗಿದ್ದಾರೆ. ಇನ್ನು ಬಹಳ ಅರ್ಜಿಗಳು ಬಾಕಿ ಇವೆ. ಇಂದು ಇನ್ನಿಬ್ಬರು ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕಾಗಿತ್ತು, ಅವರ ಆರೋಗ್ಯ ಸರಿ ಇಲ್ಲದ ಕಾರಣ ಸೇರ್ಪಡೆ ಕಾರ್ಯಕ್ರಮ ಮುಂದೂಡಿದ್ದೇವೆ. ಕೆಲವರು ಅಧಿವೇಶನ ಮುಗಿಯಲಿ ಎಂದು ಕಾಯುತ್ತಿದ್ದಾರೆ. ನಾವು ಮುಂದಿನ ದಿನಗಳಲ್ಲಿ ಪ್ರತಿವಾರ ಸಭೆ ಮಾಡಿ ಒಬ್ಬೊಬ್ಬರನ್ನೇ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ. ಈ ಮಧ್ಯೆ ನಮ್ಮ ಪ್ರವಾಸಗಳು ನಿಗಯಾಗಿವೆ. ಈ ಪ್ರವಾಸ ಸಂದರ್ಭದಲ್ಲಿ ಕೆಲವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು ಎಂದರು.