

ಆಲೂರು: ರಾಮಾಯಣ ಮಹಾಕಾವ್ಯ ರಚಿಸಿದ ವಾಲ್ಮೀಕಿ ಅವರ ಜೀವನ, ಸಂದೇಶಗಳ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷ ಹಾಗೂ ತಹಸೀಲ್ದಾರ್ ಎಚ್.ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಶ್ರೀವಾಲ್ಮೀಕಿ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಮಹರ್ಷಿ ಅವರು ಸಂತರು, ದಾರ್ಶನಿಕರು, ನೀತಿ ಶಾಸ್ತ್ರಜ್ಞರು, ತತ್ವಜ್ಞಾನಿಗಳು, ಮಹಾನ್ ಚಿಂತಕರು, ಸಮಾಜ ಸುಧಾರಕರು, ಅತ್ಯುತ್ತಮ ಅರ್ಥಶಾಸ್ತ್ರಜ್ಞರು, ಶ್ರೇಷ್ಠ ಚಿಂತಕರು, ಅವರು ಬರೆದ ರಾಮಾಯಣ ಗ್ರಂಥವು ಪುರಾತನವಾಗಿದೆ. ಇವರನ್ನು ಆದಿಕವಿ ಎಂದು ಕರೆಯಲಾಗುತ್ತಿದೆ. ರಾಮಾಯಣ ಕಾವ್ಯದಲ್ಲಿ ಮಾತೃ, ಪಿತೃ, ಆಚಾರ್ಯ, ಅತಿಥಿ ದೇವೋಭವದಂತಹ ಮೌಲ್ಯಗಳನ್ನು ಎತ್ತಿಹಿಡಿಯಲಾಗಿದೆ. ಮಮತೆ, ಸಮತೆ, ಭ್ರಾತೃತ್ವ, ತ್ಯಾಗ, ದೇಶಪ್ರೇಮ, ಅಳಿಲುಸೇವೆ ಮುಂತಾದ ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸಲಾಗಿದೆ. ಅವರ ಜಯಂತಿಯನ್ನು ಸರ್ಕಾರ ಆಚರಿಸುತ್ತಿರುವುದು ಒಳ್ಳೆಯ ಕಾರ್ಯವಾಗಿದೆ. ರಾಮಾಯಣ ಮನುಕುಲಕ್ಕೆ ಮಾರ್ಗದರ್ಶನ ನೀಡುವ ಗ್ರಂಥವಾಗಿದ್ದು, ಅದರಲ್ಲಿರುವ ಸಂದೇಶಗಳು ಎಲ್ಲ ಕಾಲಕ್ಕೂ ಪ್ರಸ್ತುತ ಸಮಾಜದಲ್ಲಿ ಜನರು ಸಂಘಟಿತರಾಗಿ ಸಕಾಲಕ್ಕೂ ಮಹಾತ್ಮರ ಸ್ಮರಣೆ ಮಾಡಬೇಕು ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದರು.
ಸಾಹಿತಿ ಕೊಟ್ರೇಶ್ ಎಸ್.ಉಪ್ಪಾರ್ ಮಾತನಾಡಿ, ಯುವ ಪೀಳಿಗೆ ವಾಲ್ಮೀಕಿ ಮಹರ್ಷಿಗಳ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನಡೆಯುವಂತೆ ಸಲಹೆ ನೀಡಿದರು.
ವಾಲ್ಮೀಕಿ ಸಮುದಾಯದ ಪ್ರತಿಭಾನ್ವಿತಾ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಮಾಜದ ಗಣ್ಯರನ್ನು ಸನ್ಮಾನಿಸಲಾಯಿತು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ವೀರಶೈವ ಸಮುದಾಯ ಭವನದಿಂದ ಡೋಲು-ತಮಟೆಗಳ ಮೂಲಕ ವಾಲ್ಮೀಕಿ ಮಹರ್ಷಿಗಳ ಭಾವಚಿತ್ರವನ್ನು ತೆರೆದ ವಾಹನದ ಮೂಲಕ ತಾಲೂಕು ಕಚೇರಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು.
ತಾಪಂ ಕಾರ್ಯನಿರ್ವಣಾಧಿಕಾರಿ ಸುಬ್ರಮಣ್ಯ ಶರ್ಮ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೌಸರ ಅಹ್ಮದ್, ತಾಲೂಕು ಆರೋಗ್ಯ ಅಧಿಕಾರಿ ನಿಸಾರ್ ಫಾತಿಮಾ, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಮಂಜುನಾಥ್, ತಾಲೂಕು ವಾಲ್ಮೀಕಿ ಸಮಾಜದ ಹಿರಿಯ ಮುಖಂಡ ರಾಮನಾಯಕ್, ದೇವರಾಜ್‌ನಾಯಕ್, ರಾಜ ನಾಯ್ಕ ಮತ್ತಿತರರು ಹಾಜರಿದ್ದರು.