

ಬಾಗಲಕೋಟೆ: ಪ್ರಸಕ್ತ 2024-25ನೇ ಸಾಲಿನ ಶೈಕ್ಷಣಿಕ ಮಾರ್ಗದರ್ಶಿ ಪುಸ್ತಕವನ್ನು ಶಾಲಾ ಹಂತದಲ್ಲಿ ನಿರ್ವಹಿಸಿ, ವಾರ್ಷಿಕ ಕ್ರೀಯಾ ಯೋಜನೆ ರೂಪಿಸುವಂತೆ ಉಸ್ತುವಾರಿ ಅಧಿಕಾರಿಗಳಿಗೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರ ತಿಳಿಸಿದರು.
ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ಶೈಕ್ಷಣಿಕ ವಿಷಯಗಳ ಕುರಿತು ಚರ್ಚಿಸಲು ಹಮ್ಮಿಕೊಂಡ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಾರ್ಷಿಕ ಕ್ರೀಯಾ ಯೋಜನೆಯನ್ವಯ ಶೈಕ್ಷಣಿಕ ಚಟುವಟಿಕೆಗಳನ್ನು ಆಯಾ ತಿಂಗಳುವಾರು ಏರ್ಪಡಿಸಿ ಎಲ್ಲ ಉಸ್ತುವಾರಿ ಅಧಿಕಾರಿಗಳು ಮೇಲುಸ್ತುವಾರಿ ಮಾಡಲು ತಿಳಿಸಿದರು.
ನನ್ನ ಶಾಲೆ ನನ್ನ ಕೊಡುಗೆ ಯೋಜನೆಯಡಿ ಎಸ್.ಡಿ.ಎಂಸಿ ಸಭೆ, ಪಾಲಕರ ಸಭೆ, ಸಾರ್ವಜನಿಕರ ಸಹಕಾರದೊಂದಿಗೆ ಶಾಲಾ ಅಭಿವೃದ್ದಿ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಿಂದ ಶೈಕ್ಷಣಿಕ ವರ್ಷದಲ್ಲಿ ಕರ್ಮಯೋಗಿ ವಿಷಯಾಧಾರಿತ ತರಬೇತಿಯನ್ನು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ನೀಡಲಾಗುವುದು. 248 ಶಾಲಾ ಮೇಲುಸ್ತುವಾರಿ ಅಧಿಕಾರಿಗಳಲ್ಲಿ ಪ್ರತಿ ಅಧಿಕಾರಿಗೆ 6 ಶಾಲೆಯನ್ನು ದತ್ತು ನೀಡಿ ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಸದರಿ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಅದರ ಶ್ರೇಯೋಭಿವೃದ್ದಿಗೆ ಕಾರ್ಯನಿರ್ವಹಿಸಲು ತಿಳಿಸಿದರು.
ವಿವೇಕ ಶಾಲಾ ಕೊಠಡಿ ಪ್ರಗತಿ, ಎಸ್.ಎ.ಟಿ.ಎಸ್ ಅನ್ವಯ ಆಧಾರ ಅಪಡೇಷನ್, ಪಠ್ಯಪುಸ್ತಕ, ಸಮವಸ್ತ್ರ, ಅತಿಥಿ ಶಿಕ್ಷಕರ ಬೇಡಿಕೆ, ಮಿಂಚಿನ ಸಂಚಾರ, ವಿದ್ಯಾರ್ಥಿಗಳಿಗೆ ನೀಡುವ ಉಚಿತ ಯೋಜನೆಗಳ ವಿವರಗಳನ್ನು ಎಸ್.ಎ.ಟಿ.ಎಸ್‍ನಲ್ಲಿ ಅಪಡೇಟ್ ಮಾಡುವ ಕುರಿತು, ಪ್ರಾಥಮಿಕ, ಪ್ರೌಢಶಾಲಾ ಕೊಠಡಿಗಳ ದುರಸ್ಥಿ, ಮಳೆಗಾಲ ಇರುವದರಿಂದ ಶಿಥಲಗೊಂಡ, ದುರಸ್ಥಿ ಕೈಗೊಳ್ಳಬೇಕಾದ ತರಗತಿ ಕೊಠಡಿಗಳಲ್ಲಿ ಮಕ್ಕಳಿಗೆ ಕೂಡಿಸದೇ ಸುರಕ್ಷಿತ ಸ್ಥಳದಲ್ಲಿ ಕೂಡಿಸಿ ಬೋಧನೆ ಕೈಗೊಳ್ಳಲು ಸೂಚಿಸಿದರು.
ಶಾಲೆಗಳಲ್ಲಿ ಕಡ್ಡಾಯವಾಗಿ ಎಸ್.ಡಿ.ಎಂ.ಸಿ ರಚನೆಯಾಗಬೇಕು. ಯುಡೈಸ್ ಅಪಡೇಷನ್ ಮತ್ತು ತರಗತಿವಾರು, ವಿಷಯವಾರು ಸಂಯುಕ್ತ ವೇಳಾ ಪಟ್ಟಿ ಸಿದ್ದತೆ ಮಾಡಿಕೊಳ್ಳಬೇಕು. ಸೇತುಬಂಧ ಪರೀಕ್ಷೆ ತೆಗೆದುಕೊಳ್ಳಬೇಕು. ಎಸ್.ಎ.ಪಿ, ಎಸ್.ಡಿ.ಪಿಗಳನ್ನು ಪ್ರತಿ ಶಾಲೆಯಲ್ಲಿ ರಚಿಸಿ ಶಾಲಾಭಿವೃದ್ದಿಗೆ ಕ್ರಮಕೈಗೊಳ್ಳಬೇಕು. ಈ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲೆ ಎಸ್.ಎಸ್.ಎಲ್.ಸಿ ಫಲಿತಾಂಶ ಕಳೆದ ಸಾಲಿನ 27ನೇ ಸ್ಥಾನದಿಂದ 13ನೇ ಸ್ಥಾನಕ್ಕೆ ಬಂದಿದ್ದು, ಜಿಲ್ಲೆಗೆ ಉತ್ತಮ ಸ್ಥಾನ ಪಡೆಯುವಲ್ಲಿ ಶ್ರಮಿಸಿದ ಶಾಲಾ ಮೇಲುಸ್ತುವಾರಿ ಅಧಿಕಾರಿಗಳಿಗೆ, ಮುಖ್ಯ ಗುರುಗಳಿಗೆ, ಶಾಲಾ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದರು.
ಸಭೆಯಲ್ಲಿ ಡಿವಾಯ್‍ಪಿಸಿಯ ಉಪ ಸಮನ್ವಯಾಧಿಕಾರಿ ಸಿ.ಆರ್.ಓಣಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಾಸ್ಮೀನ್ ಕಿಲ್ಲೇದಾರ, ದಾಸರ, ಎನ್.ವಾಯ್.ಕುಂದರಗಿ ಸೇರಿದಂತೆ ಕ್ಷೇತ್ರ ಸಮನ್ವಯಾಧಿಕಾರಿ, ಶಿಕ್ಷಣಾಧಿಕಾರಿಗಳು, ಅಕ್ಷರ ದಾಸೋಹ ಅಧಿಕಾರಿಗಳು, ವಿಷಯ ಪರಿವೀಕ್ಷಕರು ಉಪಸ್ಥಿತರಿದ್ದರು.