

ಕಾರವಾರ ಸ್ಥಳೀಯರ ವಿರೋಧದ ನಡುವೆ ರಾಷ್ಟ್ರೀಯ ಹೆದ್ದಾರಿ 66 ರ ಎರಡು ಟೋಲ್ ಗೇಟ್ಗಳಲ್ಲಿ ಐಆರ್ಬಿ ಕಂಪನಿ ಜಿಲ್ಲೆಯ ನೋಂದಣಿ ಸಂಖ್ಯೆ ಹೊಂದಿರುವ ವಾಹನಗಳಿಗೂ ಸೋಮವಾರದಿಂದ ಶುಲ್ಕ ಆಕರಿಸಲು ಪ್ರಾರಂಭಿಸಿದೆ.
ಫೆ.9 ರಿಂದ ಟೋಲ್ ಶುಲ್ಕ ವಸೂಲಿ ಪ್ರಾರಂಭಿಸುವುದಾಗಿ ಐಆರ್ಬಿ ಪತ್ರಿಕಾ ಹೇಳಿಕೆ ನೀಡಿತ್ತು. ಆದರೆ, ವಿವಿಧ ಸಂಘಟನೆಗಳು ಪ್ರತಿಭಟನೆಗಿಳಿದಿದ್ದವು. ಈ ನಡುವೆ ಫೆ. 8 ರಂದು ಬನವಾಸಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಐಆರ್ಬಿ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸಿದ್ದರು. ಸ್ಥಳೀಯರಲ್ಲಿ ಹಲವು ಗೊಂದಲಗಳಿವೆ. ಸಂಪೂರ್ಣ ಕಾಮಗಾರಿ ಮುಗಿಯುವವರೆಗೂ ಟೋಲ್ ವಸೂಲಿಗೆ ವಿರೋಧವಿದೆ ಎಂದಿದ್ದರು. ಸ್ಥಳೀಯರ ಗೊಂದಲ ನಿವಾರಣೆಯಾಗುವವರೆಗೆ ಜಿಲ್ಲೆಯ ನೋಂದಣಿ ಸಂಖ್ಯೆ ಹೊಂದಿರುವ ವಾಹನಗಳಿಗೆ ಶುಲ್ಕ ವಸೂಲಿ ಮಾಡದಂತೆ ಸೂಚಿಸಿದ್ದರು. ಅದಕ್ಕೆ ಐಆರ್ಬಿ ಅಧಿಕಾರಿಗಳೂ ಒಪ್ಪಿಕೊಂಡಿದ್ದರು. ತಮ್ಮ ಮಾತಿನಂತೆ ಸ್ಥಳೀಯ ವಾಹನಗಳಿಗೆ ವಿನಾಯಿತಿಯನ್ನು ನೀಡಿದ್ದರು. ಆದರೆ, ವಾರ ಕಳೆಯುವುದರೊಳಗೆ ಮತ್ತೆ ಶುಲ್ಕ ಆಕರಣೆಗೆ ಮುಂದಾಗಿರುವುದು ವಾಹನ ಮಾಲೀಕರ ವಿರೋಧಕ್ಕೆ ಕಾರಣವಾಗಿದೆ. ಸೋಮವಾರ ಹಟ್ಟಿಕೇರಿ ಹಾಗೂ ಹೊಳೆಗದ್ದೆ ಟೋಲ್ ಗೇಟ್ನಲ್ಲಿ ಸ್ಥಳೀಯ ಸಂಘಟನೆಗಳ ಕೆಲ ಮುಖಂಡರು ಬಂದು ಟೋಲ್ ವಸೂಲಿಗೆ ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ಸಾಕಷ್ಟು ಪೊಲೀಸ್ ಸಿಬ್ಬಂದಿ ನಿಯೋಜಿಸಿದ್ದರಿಂದ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಂಡಿಲ್ಲ. ಸೋಮವಾರ ಹಟ್ಟಿಕೇರಿ ಬಳಿ ನಡೆದ ಸಣ್ಣ ಸ್ವರೂಪದ ಪ್ರತಿಭಟನೆಯಲ್ಲಿ ವಿಶ್ವಜಿತ್, ಅನಂತ ಭಟ್ ಇತರರು ಇದ್ದರು.
ಸ್ಥಳೀಯ ವಾಹನಗಳಿಗೆ ಮಾಸಿಕ ಪಾಸ್ ದರ ನಿಗದಿ ಅಂಕೋಲಾ ಹಟ್ಟಿಕೇರಿ ಟೋಲ್ ಗೇಟ್ನಲ್ಲಿ ಸ್ಥಳೀಯ ವಾಹನಗಳಿಗೆ ಮಾಸಿಕ ಪಾಸ್ನ ದರ ನಿಗದಿ ಮಾಡಲಾಗಿದೆ. ಯಲ್ಲೋ ಬೋರ್ಡ್ ಕಾರುಗಳಿಗೆ 800 ರೂ. 20 ಕಿಮೀ ವ್ಯಾಪ್ತಿಯಲ್ಲಿ ಓಡಾಡುವ ಇತರ ಕಾರುಗಳಿಗೆ 250 ರೂ. ಮಿನಿ ಬಸ್, ಪಿಕಪ್, 407 ಮುಂತಾದ ವಾಹನಗಳಿಗೆ 850 ರೂ. ಬಸ್, ಕಲ್ಲು, ಮರಳಿನ ಲಾರಿಗಳಿಗೆ 2800 ರೂ., ಮಲ್ಟಿ ಎಕ್ಸೆಲ್ ವಾಹನಗಳಿಗೆ 3600 ರೂ. ಶಾಲಾ ವಾಹನಗಳಿಗೆ 1 ಸಾವಿರ ರೂ.ದರ ನಿಗದಿ ಮಾಡಲಾಗಿದೆ.
ನಾಳೆ ಪ್ರತಿಭಟನೆ ಸ್ಥಳೀಯ ವಾಹನಗಳಿಗೆ ಟೋಲ್ ಶುಲ್ಕ ಆಕರಣೆ ವಿರೋಧಿಸಿ ಫೆ.19 ರಂದು ತೀವ್ರ ಸ್ವರೂಪದ ಪ್ರತಿಭಟನೆ ನಡೆಸುವುದಾಗಿ ಜೆಡಿಎಸ್ ನಾಯಕಿ ಮೋಹಿನಿ ನಾಯ್ಕ ತಿಳಿಸಿದ್ದಾರೆ.
ಫಾಸ್ಟ್ಯಾಗ್ ಇದ್ದರೂ ಹಣ ಫಾಸ್ಟ್ಯಾಗ್ ಇದ್ದರೂ ಅದು ಸರಿಯಾಗಿ ರೀಡ್ ಆಗುತ್ತಿಲ್ಲ ಎಂಬ ಕಾರಣ ನೀಡಿ ಹಣ ಪಡೆಯಲಾಗುತ್ತಿದೆ ಎಂಬ ಆರೋಪ ಬಂದಿದೆ. ಟೋಲ್ ಗೇಟ್ನಲ್ಲಿ ತಮಗಾದ ಕಹಿ ಅನುಭವವನ್ನು ಕಲಾವಿದ ಕೆರೆಮನೆ ಶಿವಾನಂದ ಹೆಗಡೆ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ. ಇದೇ ರೀತಿ ಇನ್ನೂ ಹಲವರು ಇಂಥ ಸಮಸ್ಯೆ ಎದುರಿಸಿದ್ದಾರೆ.