ವಾಣಿಜ್ಯ ಹಡಗಿನ ಇಂಜಿನ್ ಕೊಠಡಿಯಲ್ಲಿ ಬೆಂಕಿ

22KWR3
Published on

ಕಾರವಾರ: ವಾಣಿಜ್ಯ ಹಡಗಿನ ಇಂಜಿನ್ ಕೊಠಡಿಯಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು, ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಂತ್ರಜ್ಞ ಸುಟ್ಟು ಗಾಯಗೊಂಡ ಘಟನೆ ಗುರುವಾರ ರಾತ್ರಿ ನಡೆದಿದೆ.

ಎಂಟಿ ವರ್ಧಮಾನ ಎಂಬ ಹಡಗಿನ ತಂತ್ರಜ್ಞ ಒಡಿಶಾ ಬೇರಾಹಂಪುರದ ಗುರು ಗೋವಿಂದ ಪ್ರಧಾನ(24) ಗಾಯಗೊಂಡಿದ್ದಾರೆ. ಅವರಿಗೆ ಕ್ರಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗುಜರಾತ್​ನ ಪೀಪವವ್ ಬಂದರಿನಿಂದ ಬಿಟುಮಿನ್(ಡಾಂಬರು) ತುಂಬಿಕೊಂಡು ಬಂದಿದ್ದ ಹಡಗು ಕಾರವಾರ ಕಡಲ ತೀರದಿಂದ ಸುಮಾರು 6 ಕಿಮೀ ದೂರದಲ್ಲಿ ನಿಂತಿತ್ತು. ಬೈತಖೋಲ್ ವಾಣಿಜ್ಯ ಬಂದರಿಗೆ ಬರುವ ಅನುಮತಿಗಾಗಿ ಕಾಯುತ್ತಿತ್ತು.

ಬಾಯ್ಲರ್ ನಿರ್ವಹಣೆ ವೇಳೆ ಬಿಸಿ ಎಣ್ಣೆ, ಉಗಿ ಹೊರ ಚಿಮ್ಮಿ ಪ್ರಧಾನ ಅವರ ಮುಖ ಸುಟ್ಟು ಹೋಗಿತ್ತು. ಹಡಗಿನ ಕ್ಯಾಪ್ಟನ್ ಮಿಥಿಲೇಶ ಕುಮಾರ್ ಕಾರವಾರ ಬಂದರಿನ ಸಹಾಯ ಕೋರಿದ್ದರು.

ಬಂದರು ಅಧಿಕಾರಿಗಳ ವಿನಂತಿಯಂತೆ ನೌಕಾನೆಲೆ ಸಾಗರ ಪ್ರಹರಿ ಬಲದ ಫಾಸ್ಟ್ ಇಂಟರ್ ಸೆಫ್ಟರ್ ಬೋಟ್(ಎಫ್​ಐಸಿ) ಮೂಲಕ ತೆರಳಿ ಗಾಯಾಳುವನ್ನು ದಡಕ್ಕೆ ಕರೆತರಲಾಯಿತು. ಗಾಯಾಳು ಚೇತರಿಸಿಕೊಳ್ಳುತ್ತಿದ್ದಾರೆ. ಹಡಗಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಬಂದರು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net