ಸೋಮವಾರಪೇಟೆ: ಗ್ರಾಮ ಪಂಚಾಯಿತಿಯ 60 ವಾಣಿಜ್ಯ ಮಳಿಗೆಗಳ ಹರಾಜಿನಿಂದ ಪಂಚಾಯಿತಿಗೆ ಲಕ್ಷಾಂತರ ರೂ.ಆದಾಯ ಲಭಿಸಿದೆ. ವಾಣಿಜ್ಯ ಮಳಿಗೆಗಳು ಪರಭಾರೆಯಾಗದಂತೆ ಪಂಚಾಯಿತಿ ಆಡಳಿತ ಮತ್ತು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೋಮವಾರಪೇಟೆ ಸಾರ್ವಜನಿಕ ಹೋರಾಟ ಸಮಿತಿ ಆಗ್ರಹಿಸಿದೆ.
24 ವರ್ಷಗಳಿಂದ ಪಾರದರ್ಶಕವಾಗಿ ಹರಾಜು ಪಕ್ರಿಯೆ ನಡೆದಿದ್ದರೆ ಪಂಚಾಯಿತಿಗೆ ಕೋಟ್ಯಂತರ ರೂ. ಆದಾಯ ಬರುತ್ತಿತ್ತು. ಆದರೆ, ಕೆಲ ಪಟ್ಟಭದ್ರ ಹಿತಾಸಕ್ತಿಗಳಿಂದ ಪಂಚಾಯಿತಿಗೆ ನಷ್ಟವಾಗಿದೆ ಎಂದು ಸಮಿತಿ ಅಧ್ಯಕ್ಷ ಸಿ.ಬಿ.ಸುರೇಶ್‌ಶೆಟ್ಟಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
3 ಸಾವಿರ ಬಾಡಿಗೆಯನ್ನು ಪಂಚಾಯಿತಿಗೆ ಕಟ್ಟಿ, ಮಳಿಗೆಗಳನ್ನು ಅಕ್ರಮವಾಗಿ ಪರಭಾರೆ ಮಾಡಿ ಮಳಿಗೆಗಳಿಂದ 20ರಿಂದ 40 ಸಾವಿರ ರೂ. ಬಾಡಿಗೆ ಪಡೆದು ಅಕ್ರಮವಾಗಿ ಲಕ್ಷಾಂತರ ಹಣ ಗಳಿಸಿದ್ದಾರೆ. ಜಿಲ್ಲಾಡಳಿತ 60 ಮಳಿಗೆಗಳ ಹರಾಜಿಗೆ ಅಧಿಸೂಚನೆ ಹೊರಡಿಸಿದ ನಂತರ ಹರಾಜು ಪ್ರಕ್ರಿಯೆ ತಡೆಯಲು ಕೆಲವರು ಒಂದು ವರ್ಷದಿಂದ ಶ್ರಮಪಟ್ಟಿದ್ದಾರೆ. ನ್ಯಾಯಾಲಯದಿಂದಲೂ ತಡೆಯಾಜ್ಞೆ ತಂದಿದ್ದರು. ಮಳಿಗೆಗಳನ್ನು ನಿಯಮಾನುಸಾರ ಹರಾಜು ಮಾಡುವಂತೆ ಹೋರಾಟ ಸಮಿತಿ ಹೋರಾಟ ಮಾಡಿಕೊಂಡೆ ಬಂದಿದೆ. ಶಾಸಕರು, ಜಿಲ್ಲಾಧಿಕಾರಿ, ತಹಸೀಲ್ದಾರ್ ಹರಾಜು ಪ್ರಕ್ರಿಯೆ ನಡೆಯುವಂತೆ ಎಲ್ಲ ತರಹದ ಸಹಕಾರ ನೀಡಿದ್ದಾರೆ. ಮುಂದಿನ ಒಂದು ವಾರದಲ್ಲಿ ಹರಾಜಿನಲ್ಲಿ ಮಳಿಗೆಗಳನ್ನು ಪಡೆದುಕೊಂಡವರ ಹೆಸರಿಗೆ ನೋಂದಣಿ ಪ್ರಕ್ರಿಯೆ ನಡೆಯಬೇಕು ಎಂದು ಆಗ್ರಹಿಸಿದರು.
ಸಮಿತಿ ಉಪಾಧ್ಯಕ್ಷ ಟಿ.ಈ.ಸುರೇಶ್ ಮಾತನಾಡಿ, ಪರಿಶಿಷ್ಟ ಜಾತಿ 9, ಪಂಗಡಕ್ಕೆ 2, ಅಂಗವಿಕಲರಿಗೆ 1 ಮಳಿಗೆಯನ್ನು ಮೀಸಲಿಡುವ ಮೂಲಕ ಜಿಲ್ಲಾಡಳಿತ ಉತ್ತಮ ಕೆಲಸ ಮಾಡಿದೆ. 40 ವರ್ಷಗಳಿಂದ ದಲಿತರು ಮಳಿಗೆಗಳನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಮೀಸಲಾಗಿರುವ ಮಳಿಗೆಗಳು ಪರಭಾರೆಯಾಗದಂತೆ ಎಚ್ಚರ ವಹಿಸಬೇಕು. ಹಣದ ಆಮಿಷ ತೋರಿಸಿ, ಪರಭಾರೆಯ ಮೂಲಕ ಬೇರೆಯವರು ಮಳಿಗೆಗಳನ್ನು ಕಿತ್ತುಕೊಂಡರೆ, ಪರಿಶಿಷ್ಟ ಜಾತಿ, ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು. ಮಳಿಗೆಗಳು ಪಾರಭಾರೆಯಾಗುವ ಸೂಚನೆಗಳು ಸಿಕ್ಕಿದ್ದು ಪಂಚಾಯಿತಿ ಆಡಳಿತ ಸೂಕ್ತ ಕ್ರಮಕೈಗೊಳ್ಳದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಸಮಿತಿ ಕಾರ್ಯದರ್ಶಿ ಪ್ರತಾಪ್, ಖಜಾಂಚಿ ರಂಗಸ್ವಾಮಿ, ಸಮಿತಿಯ ದಾಕ್ಷಾಯಿಣಿ ಇದ್ದರು.