ವಾಡಿಕೆಗಿಂತ ಮಳೆ ಕಡಿಮೆ ಆದರೂ ತಪ್ಪದ ಪ್ರವಾಹ !

bkt-02-11-c
Published on

ಅಶೋಕ ಶೆಟ್ಟರ, ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ಮತ್ತೊಮ್ಮೆ ಮೂರು ನದಿಗಳು ಅಬ್ಬರಿಸುತ್ತಿವೆ. ಕಳೆದ ಒಂದು ವಾರ ಪ್ರವಾಹಕ್ಕೆ ಸಿಕ್ಕು ಮುಧೋಳ ತಾಲೂಕು ಗಢಗಢ ಎನ್ನುತ್ತಿದ್ದರೆ ಕೃಷ್ಣಾದಲ್ಲಿ ಸ್ವಲ್ಪ ಕಡಿಮೆ. ಈಗ ಮಲಪ್ರಭಾ ನದಿ ತೀರದಲ್ಲೂ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.
ಪ್ರವಾಹ ಎಂದ ತಕ್ಷಣ ಅಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಆಗಿರುತ್ತದೆ ಎನ್ನುವುದು ಹೊರಗಿನ ಜನರಲ್ಲಿ ಮೂಡುವ ಸಹಜ ಅಭಿಪ್ರಾಯ. ಆದರೆ, ಇದಕ್ಕೆ ಅಪವಾದ ಆಗಿರುವುದು ಬಾಗಲಕೋಟೆ ಜಿಲ್ಲೆ. ಪ್ರಸಕ್ತ ವರ್ಷವೂ ಸಹ ಇಲ್ಲಿ ಮಳೆಯಾಗದೇ ಪ್ರವಾಹದಿಂದ ತತ್ತರಿಸುವ ಪರಿಸ್ಥಿತಿಗೆ ಮತ್ತೊಮ್ಮೆ ಸಾಕ್ಷಿಯಾಗಿದೆ...!!

ಜುಲೈ ತಿಂಗಳಲ್ಲಿ ಇಡೀ ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ ಶೇ. ೧೧ ರಷ್ಟು ಮಾತ್ರ ಮಳೆ ಹೆಚ್ಚಾಗಿ ಸುರಿದಿದೆ. ಅದರಲ್ಲಿ ಘಟಪ್ರಭಾ ಅಬ್ಬರದಿಂದ ನಲುಗುತ್ತಿರುವ ಮುಧೋಳ ತಾಲೂಕು ಹಾಗೂ ಸದ್ಯ ಪ್ರವಾಹದ ಸುಳಿವು ನೀಡಿ ಬೆಳೆಗಳನ್ನು ಮುಳುಗಿಸಲು ರಂಭಸಿರುವ ಮಲಪ್ರಭಾ ಎ-ೆಕ್ಟ್ ನ ಬಾದಾಮಿ ತಾಲೂಕಿನಲ್ಲಿ ಜುಲೈ ತಿಂಗಳಲ್ಲಿ ವಾಡಿಕೆಗಿಂತಲೂ ಕಡಿಮೆ ಆಗಿದೆ.

ಮಹಾರಾಷ್ಟ್ರ, ಬೆಳಗಾವಿ ಮಳೆ :
ಮಹಾರಾಷ್ಟ್ರದ ಕೃಷ್ಣಾ ವ್ಯಾಪ್ತಿಯಲ್ಲಿ ಮಳೆ ಅಬ್ಬರ ಶುರುವಾಗುತ್ತಿದ್ದಂತೆ ಬಾಗಲಕೋಟೆ ಜಿಲ್ಲೆಯ ಕೃಷ್ಣಾ ತೀರದಲ್ಲಿ ನೀರಿನ ಹರಿವು ಹೆಚ್ಚಾಗುತ್ತದೆ. ಅಲ್ಲಿ ರಣಕೇಕೆ ಹಾಕಿದರೆ ಇಲ್ಲಿನ ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ. ಹಾಗೆಯೇ ಮಹಾರಾಷ್ಟ್ರ ಜೊತೆಗೆ ಬೆಳಗಾವಿಯಲ್ಲಿ ವರುಣ ಆರ್ಭಟಿಸಿದರೆ ಜಿಲ್ಲೆಯ ಘಟಪ್ರಭಾ ನದಿ ತೀರದಲ್ಲೂ ಪ್ರವಾಹ ಉಂಟಾಗುತ್ತದೆ. ಇನ್ನು ಬೆಳಗಾವಿ ಜೊತೆ ಬೆಣ್ಣೆಹಳ್ಳಿ ಅಬ್ಬರಿಸಿದರೆ ಇಲ್ಲಿನ ಮಲಪ್ರಭಾ ನದಿ ಉಗ್ರರೂಪಕ್ಕೆ ತೀರುಗಿ ಬಾದಾಮಿ, ಹುನಗುಂದ ತಾಲೂಕುಗಳು ಹಣ್ಣುಗಾಯಿ ಆಗುತ್ತವೆ. ಹಾಗೆಂದು ಅಲ್ಲೆಲ್ಲ ಮಳೆ ಕೊರತೆಯಾದರೆ ಜಿಲ್ಲೆಯ ಮೂರು ನದಿಗಳು ನೀರಿಲ್ಲದೆ ಜನ-ಜಾನುವಾರುಗಳು ಸಂಕಷ್ಟ ಎದುರಿಸಬೇಕಾಗುತ್ತದೆ. ಹೀಗಾಗಿ ಅಲ್ಲಿ ಜಾಸ್ತಿ ಮಳೆಯಾದರೂ ಇಲ್ಲವೇ ಕಡಿಮೆಯಾದರೂ ಜಿಲ್ಲೆಗೆ ಸಮಸ್ಯೆ ತಪ್ಪಿದ್ದಲ್ಲ.

ಕೃಷ್ಣಾ, ಮಲಪ್ರಭಾದಿಂದ ೧೭ ಸಾವಿರ ಹೆಕ್ಟರ್ ಬೆಳೆ ಜಲಾವೃತ :
ಕಳೆದ ಒಂದು ವಾರದಿಂದ ಕೃಷ್ಣಾ ಮತ್ತು ಘಟಪ್ರಭಾ ನದಿಗಳು ಉಕ್ಕಿ ಹರಿಯುತ್ತಿದ್ದು, ಗ್ರಾಮಗಳಿಗಿಂತ ಗ್ರಾಮಗಳ ವ್ಯಾಪ್ತಿಗೆ ಬರುವ ಜಮೀನುಗಳಿಗೆ ನೀರು ಹೆಚ್ಚಿನ ಪ್ರಮಾಣದಲ್ಲಿ ನುಗ್ಗಿದ್ದು, ಸದ್ಯದ ವರೆಗೂ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಸೇರಿ ಅಂದಾಜು ೧೭ ಸಾವಿರ ಹೆಕ್ಟರ್ ಪ್ರದೇಶದ ಬೆಳೆಗಳು ಜಲಾವೃತವಾಗಿವೆ. ನೀರು ಇಳಿದ ಬಳಕವಷ್ಟೆ ಬೆಳೆಹಾನಿಯ ಅಂದಾಜು ಸಿಗಲಿದೆ. ಜುಲೈ ತಿಂಗಳು ಜಿಲ್ಲೆಯಲ್ಲಿ ಭಾರಿ ಮಳೆ ಆಗಿಲ್ಲವಾದ್ದರಿಂದ ಮಣ್ಣಿನ ಮನೆಗಳು ಹೆಚ್ಚಿನ ಪ್ರಮಾಣದಲ್ಲಿ ಹಾನಿಗೆ ಒಳಗಾಗಿಲ್ಲ. ಇತ್ತೀಚಿಗೆ ೪೪ ಮನೆಗಳು ಹಾನಿಯಾಗಿರುವ ವರದಿಯಾಗಿದೆ.
ಕೃಷ್ಣಾ ನದಿಗೆ ಒಳ ಮತ್ತು ಹೊರ ಹರಿವು ಇನ್ನೂ ಮೂರು ಲಕ್ಷದವರೆಗೂ ಇದ್ದರೆ, ಘಟಪ್ರಭಾ ನದಿಗೆ ೮೦ ಸಾವಿರದಿಂದ ಈಗ ೫೦ ಸಾವಿರಕ್ಕೆ ಇಳಿಕೆ ಆಗಿದೆ. ಇದರಿಂದ ಮುಧೋಳ ತಾಲೂಕಿನ ಚಿಚಖಂಡಿ ಸೇತುವೆ ಜಲಾವೃತರಿಂದ ಹೊರ ಬಂದಿದ್ದು, ಅಲ್ಲಿ ಲಘುವಾಹನಗಳ ಸಂಚಾರ ಆರಂಭವಾಗಿದೆ. ಭಾರಿ ವಾಹನಗಳನ್ನು ಸದ್ಯ ನಿಷೇಧ ಮಾಡಲಾಗಿದೆ ಎಂದು ಮುಧೋಳ ತಹಸೀಲ್ದಾರ್ ವಿನೋದ ಹತ್ತಳ್ಳಿ ತಿಳಿಸಿದ್ದಾರೆ.

ಮಲಪ್ರಭಾ ಒಡಲಲ್ಲೂ ಬೆಳೆ ಜಲಾವೃತ:
ಗುರುವಾರದಿಂದ ಮಲಪ್ರಭಾ ನದಿಗೆ ನೀರಿನ ಹರಿವು ಹೆಚ್ಚಾಗಿದೆ. ಶುಕ್ರವಾರ ೧೫ ಸಾವಿರಕ್ಕೆ ಏರಿಕೆ ಆಗಿದ್ದು, ಜಮೀನುಗಳಿಗೆ ನೀರು ನುಗ್ಗುತ್ತಿದೆ. ಇದರಿಂದ ಕಬ್ಬು, ಜೋಳ. ಮೆಕ್ಕೆಜೋಳ, ಪೇರಲ, ಸೇರಿ ಸಾವಿರಾರು ಎಕರೆ ಪ್ರದೇಶದ ಜಮೀನುಗಳ ಬೆಳೆಗಳು ಜಲಾವೃತವಾಗಿವೆ. ಬಾದಾಮಿ ತಾಲೂಕಿನ ಗೋವನಕೊಪ್ಪ, ಕಿತ್ತಲಿ, ಹೆಬ್ಬಳ್ಳಿ ಬ್ಯಾರೇಜ್ ಗಳ ಮೇಲೆ ನೀರು ಹಾಯ್ದು ಹೊರಟಿದೆ. ಇನ್ನು ತಳಕವಾಡ ಗ್ರಾಮದ ಕಡೆಗೆ ನೀರು ಮುಖ ಮಾಡಿದ್ದು, ವೀರಭದ್ರೇಶ್ವರ, ಮಾರುತೇಶ್ವರ ದೇಗುಲವನ್ನು ನೀರು ಸುತ್ತುವರೆದಿದ್ದು, ನೀರಿನ ಹರಿವು ಇನ್ನಷ್ಟು ಜಾಸ್ತಿಯಾದಲ್ಲಿ ತಳಕವಾಡ, ಬೀರನೂರ, ಆಲೂರ ಎಸ್‌ಕೆ, ಚಿರ್ಲಕೊಪ್ಪ, ಕಳಸ, ಕಿತ್ತಲಿ, ಹೆಬ್ಬಳ್ಳಿ ಸೇರಿ ಅನೇಕ ಗ್ರಾಮಗಳಿಗೆ ನೀರು ನುಗ್ಗಲಿದೆ. ನದಿಗೆ ಆಕಸ್ಮಾತ್ ೩೦ ಸಾವಿರ ಕ್ಯೂಸೆಕ್ ನೀರು ಬಂದಲ್ಲಿ ಬಾದಾಮಿ, ಗುಳೇದಗುಡ್ಡ, ಹುನಗುಂದ, ಇಳಕಲ್ಲ ತಾಲೂಕುಗಳ ಅಂದಾಜು ೭೧ ಗ್ರಾಮಗಳು ಪ್ರವಾಹಕ್ಕೆ ಸಿಲುಕುತ್ತವೆ.

ಜಲಾವೃತ ರಸ್ತೆ, ಸೇತುವೆ ಮೇಲೆ ಕೆಲ ದಿನ ಭಾರಿ ವಾಹನ ನಿಷೇಧ :
ಇನ್ನು ಈಗಾಗಲೇ ಕೃಷ್ಣಾ ಮತ್ತು ಘಟಪ್ರಭಾ ನದಿ ಪ್ರವಾಹದಿಂದ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳು ಸೇರಿ ಒಟ್ಟು ೨೮.೧೮ ಕಿ.ಮೀ. ನ ೩೧ ರಸ್ತೆಗಳು ಮುಳುಗಿವೆ. ೬ ಸೇತುವೆಗಳು ಜಲಾವೃತವಾಗಿವೆ. ಇಲ್ಲಿ ನೀರು ಇಳಿದು ಸಂಚಾರ ಆರಂಭವಾದ ಬಳಿಕ ಒಂದೇರಡು ವಾರ ಲಘುವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಿ, ಭಾರಿ ವಾಹನ ಸಂಚಾರವನ್ನು ನಿಷೇಽಸುವಂತೆ ಸಂಬಂಧಪಟ್ಟ ತಾಲೂಕು ಸಹಾಯಕ ಕಾರ್ಯನಿರ್ವಾಹಕ ಇಂಜಿಯರ್ ಗಳಿಗೆ ಬಾಗಲಕೋಟೆ ಪಿಡಬ್ಲುಡಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಜಶೇಖರ ಕಡಿವಾಲ ನಿರ್ದೇಶನ ನೀಡಿದ್ದಾರೆ. ನೀರು ಇಳಿದ ಬಳಿಕ ರಸ್ತೆ, ಸೇತುವೆಗಳು ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎನ್ನುವ ಕುರಿತು ವರದಿ ಸಲ್ಲಿಸಲು ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net