ವಾಟೆಹೊಳೆ ಕಾಲುವೆ ದುರಸ್ತಿಗೊಳಿಸದೆ ನಿರ್ಲಕ್ಷೃ

IMG-20250703-WA0200
Published on

ಆಲೂರು: ಹದಿನೆಂಟು ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಬೇಕಾದ ವಾಟೆಹೊಳೆ ಜಲಾಶಯ ಕಾಲುವೆ ದುರಸ್ತಿಯಾಗದ ಕಾರಣ ಕೇವಲ ಐದು ಸಾವಿರ ಹೆಕ್ಟೇರ್ ಪ್ರದೇಶಕ್ಕೂ ನೀರು ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಆಲೂರು-ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಅಸಮಾಧಾನ ವ್ಯಕ್ತಪಡಿಸಿದರು.

ಅವರು ಆಲೂರು ತಾಲೂಕಿನ ವಾಟೆಹೊಳೆ ಜಲಾಶಯ ಭರ್ತಿಯಾದ ಹಿನ್ನೆಲೆ ಪತ್ನಿ ಪ್ರತಿಭಾ ಜತೆ ಬಾಗಿನ ಅರ್ಪಿಸಿ ಮಾತನಾಡಿ, ಆಲೂರು ತಾಲೂಕಿನ ಜೀವನದಿ ವಾಟೆಹೊಳೆ ಜಲಾಶಯ ಅವಧಿಗೂ ಮೊದಲೇ ಭರ್ತಿಯಾಗಿದ್ದು ಈ ಭಾಗದ ರೈತರ ಮೊಗದಲ್ಲಿ ಮಂದಹಾಸ ಬೀರಿದೆ. ಈಗಾಗಲೇ ಜಲಾಶಯದಲ್ಲಿ ಸುಮಾರು ಒಂದೂವರೆ ಟಿಎಂಸಿ ನೀರು ಸಂಗ್ರಹವಾಗಿದ್ದು, ಸುಮಾರು ಹದಿನೆಂಟು ಹೆಕ್ಟೇರ್ ಪ್ರದೇಶಕ್ಕೆ ನಿರುಣಿಸಬಹುದಾಗಿದೆ. ಅದರೆ ಸರ್ಕಾರ ವಾಟೆಹೊಳೆ ಇಲಾಖೆಯನ್ನು ಸಂಪೂರ್ಣ ಕಡೆಗಣಿಸಿ, ಜಲಾಶಯ ಹಾಗೂ ಕಾಲುವೆ ಅಭಿವೃದ್ಧಿಗೆ ಒಂದು ರೂಪಾಯಿ ಹಣ ಬಿಡುಗಡೆ ಮಾಡಿಲ್ಲ. ಆದ್ದರಿಂದ ಕಾಲುವೆಯಲ್ಲಿ ಹೂಳು ತುಂಬಿಕೊಂಡು ನೀರು ಮುಂದಕ್ಕೆ ಹರಿಯದೆ ಕೇವಲ ಮೂರ್ನಾಲ್ಕು ಕಿ.ಲೋ.ಮೀಟರ್ ಮಾತ್ರ ನೀರು ಹರಿಯುತ್ತಿದ್ದು ನಾಲ್ಕೈದು ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರು ಬಳಕೆಯಾಗುತ್ತಿದೆ.

ಈ ಬಗ್ಗೆ ಹಲವಾರು ಬಾರಿ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವ ಮೂಲಕ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಎರಡ್ಮೂರು ಬಾರಿ ಭೇಟಿ ಮಾಡಿ ಮನವರಿಕೆ ಮಾಡಿಕೊಟ್ಟಿದ್ದೇನೆ. ಅವರೂ ಸ್ಪಂದಿಸಿದ್ದಾರೆ, ಅನುದಾನ ಬಿಡುಗಡೆ ಮಾಡಬಹುದು ಎಂದುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಉಪ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅನುದಾನಬಿಡುಗಡೆ ಮಾಡುವಂತೆ ಒತ್ತಾಯಿಸುತ್ತೇನೆ ಎಂದರಲ್ಲದೆ, ನೀರು ಹೊರ ಬಿಡುವ ಸಂದರ್ಭದಲ್ಲಿ ನದಿಪಾತ್ರದ ಜನರಿಗೆ ಸೂಚನೆ ನೀಡುವಂತೆ ಸೂಚಿಸಿದರು.

ತಹಸೀಲ್ದಾರ್ ಮಲ್ಲಿಕಾರ್ಜುನ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುಬ್ರಹ್ಮಣ್ಯ ಶರ್ಮ, ವಾಟೆಹೊಳೆ ಇಲಾಖೆ ಎಇಇ ಧರ್ಮರಾಜ್, ಇಂಜಿನಿಯರ್ ಸಂದೀಪ್, ಜಿಲ್ಲಾ ಬಿಜೆಪಿ ನಾಯಕಿ ಪ್ರತಿಭಾ ಮಂಜುನಾಥ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಬ್ಬನ ಕೃಷ್ಣ, ಮುಖಂಡ ಲೋಕೇಶ್ ಕಣಗಾಲ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net