ವಸತಿ ಶಾಲೆಯ ಅಟೆಂಡರ್ ವಿರುದ್ಧ ದೂರು ದಾಖಲು

Published on

ಗುಂಡ್ಲುಪೇಟೆ: ಬಾಲಕಿಯರೊಂದಿಗೆ ವಸತಿ ನಿಲಯದ ಅಟೆಂಡರ್ ಅಸಭ್ಯ ವರ್ತನೆ ತೋರಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ತಾಲೂಕಿನ ಮೇಲುಕಾಮನಹಳ್ಳಿಯ ಮುರಾರ್ಜಿ ವಸತಿ ಶಾಲೆಯ ಅಟೆಂಡರ್ ನಾಗರಾಜು ವಿರುದ್ಧ ವಸತಿ ಶಾಲಾ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಕೇಳಿ ಬಂದಿತ್ತು. ಈ ಕಾರಣ ನಾಗರಾಜು ವಿರುದ್ಧ ಪ್ರಕರಣ ದಾಖಲಾಗಿದೆ. ವಸತಿ ಶಾಲೆಯ ವಿದ್ಯಾರ್ಥಿನಿಯೊಂದಿಗೆ ಕೆಟ್ಟ ರೀತಿಯಲ್ಲಿ ನಡೆದುಕೊಂಡ ಬಗ್ಗೆ ವಿದ್ಯಾರ್ಥಿನಿಯರು ಹಾಗೂ ಪಾಲಕರು ಗುರುವಾರ ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್.ಎಸ್.ಬಿಂದ್ಯಾ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ವಸತಿ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿಯ ಸಾಮೂಹಿಕ ವರ್ಗಾವಣೆಗೆ ಸೂಚನೆ ನೀಡಿದ್ದರು.

ಇದರ ಬೆನ್ನಲ್ಲೇ ಗುಂಡ್ಲುಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹೇಮಾವತಿ ನೀಡಿದ ದೂರಿನ ಮೇರೆಗೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಅಪರಾಧಗಳ ಕಾಯ್ದೆ 2012ರ ಮಕ್ಕಳ ರಕ್ಷಣೆ (ಯುಎಸ್ 8,12) ಸೆಕ್ಷನ್ ಅಡಿ ಎಫ್‌ಐಆರ್ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ನಾಗರಾಜ ತಲೆಮರೆಸಿಕೊಂಡಿದ್ದು ಈತನ ಬಂಧನಕ್ಕೆ ಪೊಲೀಸರು ಕ್ರಮಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net