ವಸತಿ ನಿಲಯಗಳ ವ್ಯವಸ್ಥೆ ಸರಿಪಡಿಸಿ

bkt-24-4
Published on

ಬಾಗಲಕೋಟೆ: ಜಿಲ್ಲೆಯ ಸರಕಾರಿ ವಸತಿ ನೀಲಯಗಳಲ್ಲಿ ವ್ಯವಸ್ಥೆಗಳು ಅಸ್ಥವ್ಯಸ್ಥವಾಗಿದ್ದು, ವಾರದೊಳಗೆ ಸರಿಪಡಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ ಮೊಹಮ್ಮದ್ ಮೋಸಿನ್ ಸೂಚಿಸಿದರು.

ಜಿಲ್ಲಾ ಪಂಚಾಯತ್ ನೂತನ ಸಭಾಂಗಣದಲ್ಲಿ ಸೋಮವಾರದಂದು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು, ನಿಗಮ ಮಂಡಳಿಗಳ ಅಧಿಕಾರಿಗಳೊಂದಿಗೆ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ವಸತಿ ನಿಲಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹಾಜರಾತಿ, ಅಡುಗೆ ಗುಣಮಟ್ಟ ಸರಿಯಾಗಿ ಇಲ್ಲದಿರುವುದು ಕಂಡು ಬಂದಿದೆ. ಅಡುಗೆ ಪದಾರ್ಥಗಳಿಗೆ ಕೊರತೆ ಇರದಿದ್ದರೂ ಕೂಡ ಗುಣಮಟ್ಟದಲ್ಲಿ ಕಡಿಮೆ ಇರುವುದು ಸರಿಯಲ್ಲ, ಅಡುಗೆ ಸಿಬ್ಬಂದಿಗೆ ತರಭೇತಿ ನೀಡಿ ವಸತಿ ನಿಲಯಗಳ ಅಡುಗೆ ಮನೆಗಳು ರುಚಿ-ಶುಚಿಯಾಗಿ ಇರುವಂತೆ ನೋಡಿಕೊಳ್ಳಲು ತಿಳಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಕಾರ್ಯಕ್ರಮಗಳನ್ನು ನಿಯಮನುಸಾರ ಮಾಡಿ ನಿಗದಿಪಡಿಸಿದ ಅನುದಾನ ಸದ್ಬಳಕೆ ಮಾಡುವುದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜವಾಬ್ದಾರಿಯಾಗಿದೆ ಎಂದರು.

ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಮಾತನಾಡಿ, 2024-25 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಉತ್ತಮವಾಗಬೇಕಾಗಿದೆ. ಶಿಕ್ಷಕರ ವರ್ಗಾವಣೆ, ಶಿಕ್ಷಕರ ಕೊರತೆ ಎಂಬ ಕಾರಣ ಹೇಳದೇ ವಸತಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವ ಕಾರ್ಯ ಮಾಡಿ, ಹೊರಗುತ್ತಿಗೆ ಸಿಬ್ಬಂದಿ ವೇತನವನ್ನು ಸಕಾಲದಲ್ಲಿ ಪಾವತಿಸುವದರಿಂದ ಯಾವುದೇ ಸಮಸ್ಯೆಗಳು ಉಲ್ಬಣಿಸುವದಿಲ್ಲ ಎಂದು ಅಲ್ಪ ಸಂಖ್ಯಾತ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶಶಿಧರ ಕುರೇರ್, ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net