ವರದಕ್ಷಿಣೆ ಕಿರುಕುಳದಿಂದ ಮಹಿಳೆ ಆತ್ಮಹತ್ಯೆ

12ankola2
Published on

ಅಂಕೋಲಾ: ಮೂರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಮಹಿಳೆಯೊಬ್ಬರು ತಾಲೂಕಿನ ಅಗ್ರಗೋಣದ ಪತಿಯ ನಿವಾಸದಲ್ಲಿ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕವಿತಾ ಮಾರುತಿ ನಾಯಕ (28)ಆತ್ಮಹತ್ಯೆ ಮಾಡಿಕೊಂಡವರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಮಾರುತಿ ನಾಯಕನನ್ನು ಗುರುವಾರ ಸಂಜೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹುಬ್ಬಳ್ಳಿ ಮೂಲದ ಕವಿತಾ ಯಲ್ಲಪ್ಪ ಡಂಬರ ಅವರನ್ನು ಅಂಕೋಲಾದ ಉದ್ಯಮಿ ಮಾರುತಿ ರಾಮ ನಾಯಕ ಹುಬ್ಬಳಿಯ ಸಿದ್ಧಾರೂಢ ಮಠದಲ್ಲಿ ಮದುವೆಯಾಗಿದ್ದರು. ಬುಧವಾರ ಗಂಡನ ಮನೆಯ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಕವಿತಾ ಅವರ ಶವವನ್ನು ಗುರುವಾರ ಬೆಳಗ್ಗೆ ತಹಸೀಲ್ದಾರ್ ಹಾಗೂ ಇನ್ಸ್​ಪೆಕ್ಟರ್ ಸ್ಥಳ ಮಹಜರು ಮಾಡಿ ಪ್ರಕರಣ ದಾಖಲಿಸಿದ್ದರು. ಡೆತ್ ನೋಟ್ ಹಾಗೂ ಮೊಬೈಲ್ ಫೋನಿನಲ್ಲಿ ಕವಿತಾ ಧ್ವನಿ ಮುದ್ರಿಕೆ ಮಾಡಿದ್ದು, ನನ್ನ ಸಾವಿಗೆ ಪತಿ ಮಾರುತಿ ನಾಯಕ ಹಾಗೂ ಮನೆಯವರು ಕಾರಣ ಎಂದು ದೂರಿದ್ದಾಳೆ.

ಈ ಕುರಿತು ಕವಿತಾಳ ಸಹೋದರ ಚಂದ್ರಶೇಖರ ಯಲ್ಲಪ್ಪ ಡಂಬರ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಗುರುವಾರ ಸಂಜೆ 6 ಗಂಟೆಯವರೆಗೂ ಪೊಲೀಸರು ಮರಣೋತ್ತರ ಪರೀಕ್ಷೆ ಹಾಗೂ ಪ್ರಕರಣ ದಾಖಲಿಸಲು ಕಾಲಹರಣ ಮಾಡಿದ್ದಾಗಿ ಸಹೋದರ ತಿಳಿಸಿದ್ದಾರೆ. ಪತಿ ಮಾರುತಿ ನಾಯ್ಕ, ಆತನ ತಾಯಿ ರಾಧಾಬಾಯಿ ನಾಯಕ, ಹಾಗೂ ಕಲ್ಪನಾ ನಾಯಕ ವರದಕ್ಷಿಣೆ ತರುವಂತೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net