

ಮದ್ದೂರು: ಜಾತಿ, ಮತ, ಲಿಂಗಗಳ ಭೇದವನ್ನು ತಿರಸ್ಕರಿಸಿದ ಬಸವಣ್ಣನವರು ಸಾಮಾಜಿಕ ಕ್ರಾಂತಿಗೆ ಕಾರಣರಾದರಲ್ಲದೆ, 12ನೇ ಶತಮಾನದಲ್ಲಿ ಹಲವಾರು ವಚನ ಸಾಹಿತ್ಯಗಳನ್ನು ರಚಿಸಿ ಸಾಮಾಜಿಕ ಅಭಿವೃದ್ಧಿಗೆ ಮುನ್ನುಡಿ ಬರೆದ ಕಾಯಕಯೋಗಿ ಎಂದು ಬೇಬಿಬೆಟ್ಟ ರಾಮಯೋಗೇಶ್ವರ ಮಠದ ಶ್ರೀಶಿವಬಸವ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಭಾನುವಾರ ರಾತ್ರಿ ವೀರಶೈವ ಅಭಿವೃದ್ಧಿ ಸಂಸ್ಥೆ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಶ್ರೀಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘ ಮತ್ತು ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀಜಗಜ್ಯೋತಿ ಬಸವೇಶ್ವರ ಜಯಂತೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಬಸವಣ್ಣನವರನ್ನು ಜಗಜ್ಯೋತಿ, ಕ್ರಾಂತಿಯೋಗಿ, ಭಕ್ತಭಂಡಾರಿ, ಮಹಾ ಮಾನವತಾವಾದಿ ಎಂದು ಕರೆಯುವ ಜತೆಗೆ ಕಾಯಕ, ನಿಷ್ಠೆ, ಧರ್ಮದ ಬುನಾದಿಯಾಗಬೇಕೆಂದು ಬಲವಾಗಿ ನಂಬಿದವರೆಂದು ಬಣ್ಣಿಸಿದ ಅವರು, ಕಾಯಕದಿಂದ ಕೈಲಾಸ ವಾಣಿಯನ್ನು ಮೈಗೂಡಿಸಿಕೊಂಡು 12ನೇ ಶತಮಾನದಲ್ಲಿ ಪ್ರಾಮಾಣಿಕತೆಯನ್ನು ತೋರಿಸಿದ ಮಹಾನ್ ಶಕ್ತಿ ಎಂದರು.
ಇತ್ತೀಚಿನ ದಿನಗಳಲ್ಲಿ ವಿಭೂತಿಗಳು ಕಣ್ಮರೆಯಾಗಿ ತಂತ್ರಜ್ಞಾನ ಬೆಳೆದಂತೆ ಆಚಾರ-ವಿಚಾರಗಳು ಕಣ್ಮರೆಯಾಗುತ್ತಿದ್ದು, ಮಕ್ಕಳಿಗೆ ಆಚಾರ-ವಿಚಾರ, ಸಂಸ್ಕೃತಿಯನ್ನು ಕಲಿಸುವ ನಿಟ್ಟಿನಲ್ಲಿ ಪಾಲಕರು ಮುಂದಾಗಬೇಕೆಂದು ತಿಳಿಸಿದರಲ್ಲದೆ ವಿಭೂತಿ ಧರಿಸುವುದು ಕೆಟ್ಟ ಆಲೋಚನೆಗಳು ಕಣ್ಮರೆಯಾಗಿ ಒಳ್ಳೆಯ ಆಲೋಚನೆಗಳತ್ತ ಮುಖ ಮಾಡುವುದೇ ವಿಭೂತಿ ಧರಿಸುವ ಮುಖ್ಯ ಉದ್ದೇಶವೆಂದರು.
ರುದ್ರಾಕ್ಷಿ ಮಣಿ ಧರಿಸುವುದರಿಂದ ಹೃದಯಾಘಾತ ಕಡಿಮೆಯಾಗಲಿದ್ದು, ಲಿಂಗ ಧರಿಸುವುದು ಶಿವಯೋಗದ ಸಾಧನೆ ಮಾಡಿ ಶರಣರ ಹಲವಾರು ಕೊಡುಗೆಗಳನ್ನು ಸ್ಮರಿಸುವುದೇ ವಿಭೂತಿ, ರುದ್ರಾಕ್ಷಿ, ಲಿಂಗ ಧರಿಸುವ ಮುಖ್ಯ ಉದ್ದೇಶವಾಗಿದೆ ಎಂದರು.
ಅಧಿಕಾರ, ಅಂತಸ್ತು, ಹಣ ಹೆಚ್ಚಾದಂತೆ ಮನುಷ್ಯ ಹಲವಾರು ಆಮಿಷಗಳಿಗೆ ಒಳಗಾಗಿ ಧರ್ಮ, ಆಚಾರ, ಸಂಸ್ಕೃತಿ ಮರೆಯುತ್ತಿರುವ ಜತೆಗೆ ಮಕ್ಕಳಲ್ಲಿಯೂ ಸಂಸ್ಕಾರ ಬೆಳೆಸದಿರುವುದು ವಿಪರ್ಯಾಸದ ಸಂಗತಿಯಾಗಿದ್ದು ಸಮಾಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿರುವ ಬಸವಣ್ಣನವರ ಹಲವಾರು ತತ್ವ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ವಾರಕೊಮ್ಮೆಯಾದರೂ ಒಂದು ವಚನವನ್ನು ಕಲಿಸುವ ಪ್ರತಿಜ್ಞೆಯನ್ನು ಪಾಲಕರು ಮಾಡಬೇಕಾದ ಅನಿವಾರ್ಯತೆಯಿದೆ ಎಂದರು.
ಮಡೇನಹಳ್ಳಿ ತೋಟದಾರ್ಯ ಮಠದ ಅರುಣಾಚಲ ಶ್ರೀಗಳು, ಎಸ್.ಐ.ಹೊನ್ನಲಗೆರೆ ರೇಣುಕಾಶ್ರಮ ಮಠದ ಶ್ರೀಶಿವಲಿಂಗಶಿವಾಚಾರ್ಯ ಕಾರ್ಯಕ್ರಮದ ಶರಣರನ್ನು ಕುರಿತು ಆಶೀರ್ವಚನ ನೀಡಿದರು
ವೈದ್ಯನಾಥಪುರ ಕದಂಬ ಜಂಗಮ ಮಠದ ಪೀಠಾಧ್ಯಕ್ಷ ರೇಣುಕಾ ಶಿವಾಚಾರ್ಯ ಶ್ರೀಗಳು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಭಿನಂದನೆ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮುದಾಯದವರನ್ನು ಗುರುತಿಸಿ ಕಾರ್ಯಕ್ರಮದ ವೇಳೆ ಅಭಿನಂದಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಮಧು.ಜಿ.ಮಾದೇಗೌಡ, ಪುರಸಭೆ ಅಧ್ಯಕ್ಷೆ ಕೋಕಿಲಾ, ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ನಿರ್ದೇಶಕ ಪಿ.ಸಂದರ್ಶ, ಮನ್‌ಮುಲ್ ನಿರ್ದೇಶಕ ಹರೀಶ್‌ಬಾಬು, ಉದ್ಯಮಿ ಎಂ.ಆರ್.ಉಮಾಪತಿ, ಸಹಕಾರ ಸಂಘಗಳ ಉಪನಿಬಂಧಕರು ಎಚ್.ಆರ್.ನಾಗಭೂಷಣ್, ವೀರಶೈವ ಜಿಲ್ಲಾಧ್ಯಕ್ಷ ಎಸ್.ಆನಂದ್, ವೀರಶೈವ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಮಹೇಶ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸಿ.ಜಿ.ಗೌರಿಶಂಕರ್, ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಪಿ.ಸ್ವಾಮಿ ಇತರರಿದ್ದರು.
ಸಾಂಸ್ಕೃತಿಕ ಮೆರವಣಿಗೆ: ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಪ್ರವಾಸಿ ಮಂದಿರದಿಂದ ಪೇಟೆ ಬೀದಿ ಮೂಲಕ ಬಸವಣ್ಣನವರ ಭಾವಚಿತ್ರವನ್ನು ಸಾಂಸ್ಕೃತಿಕ ಕಲಾ ತಂಡಗಳೊಟ್ಟಿಗೆ ಮೆರವಣಿಗೆ ಕೈಗೊಂಡು ವೇದಿಕೆ ಕಾರ್ಯಕ್ರಮಕ್ಕೆ ಕರೆತರಲಾಯಿತು.