ವಿಜಯವಾಣಿ ಸುದ್ದಿಜಾಲ ಶಿಡ್ಲಘಟ್ಟ
ಜಗತ್ತಿನಲ್ಲಿ ಇನ್ನಾವುದೇ ಭಾಗದಲ್ಲಿ ನಡೆಯದ ಸಾಮಾಜಿಕ ಕ್ರಾಂತಿಯಾದದ್ದು ಕರ್ನಾಟಕದಲ್ಲಿ ಶಿವಶರಣರಿಂದ ಮಾತ್ರ. ಶಿವಶರಣರು ನೀಡಿದ ವಚನಸಾಹಿತ್ಯವು ಅಪರೂಪದ ಮೌಲ್ಯಗಳ ಆಗರವಾಗಿದೆ. ವಚನಗಳನ್ನು ಉಳಿಸುವಲ್ಲಿ ಫ.ಗು.ಹಳಕಟ್ಟಿ ಅವರ ಕೊಡುಗೆ ಅಪಾರವಾದುದು ಎಂದು ದೇವನಹಳ್ಳಿ ತಾಲೂಕು ಶರಣಸಾಹಿತ್ಯ ಪರಿಷತ್ ಅಧ್ಯಕ್ಷ ಮ.ಸುರೇಶ್‌ಬಾಬು ಹೇಳಿದರು.
ತಾಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ದೇವನಹಳ್ಳಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಸಾಕ್ಷಿಮುರುಗನ್ ಸೇವಾ ಟ್ರಸ್ಟ್ ಸಹಯೋಗದಲ್ಲಿ ವಚನ ಪಿತಾಮಹ ಫ.ಗು.ಹಳಕಟ್ಟಿ ಅವರ ಜಯಂತಿ ಪ್ರಯುಕ್ತ ಉಚಿತ ನೋಟ್‌ಪುಸ್ತಕ, ಲೇಖನಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಪರೂಪದ ಕಲ್ಲೊಂದರಲ್ಲಿನ ಅನಗತ್ಯ ಭಾಗಗಳನ್ನು ಶಿಲ್ಪಿಯು ಕೆತ್ತಿದರೆ ಅದೇ ಶಿಲೆಯು ದೇವರಾಗಬಲ್ಲದು. ಮಗುವಿನಲ್ಲಿರುವ ಅನಗತ್ಯ ಅಂಶಗಳು, ಕೆಟ್ಟ ಗುಣಗಳನ್ನು ಹೋಗಲಾಡಿಸಿ ಮಗುವಿನಲ್ಲಿ ದೈವತ್ವಗುಣವನ್ನು ಮನೆಮಾಡಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಎಳೆಯ ವಯಸ್ಸಿನಿಂದಲೇ ಮಕ್ಕಳು ಅಧ್ಯಯನ ಶೀಲಗುಣ ಹೆಚ್ಚಿಸಿಕೊಳ್ಳಬೇಕು ಎಂದರು.
ತಾಲೂಕು ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಚಿದಾನಂದ ಬಿರಾದಾರ್ ಮಾತನಾಡಿ, ಕನ್ನಡ ಸಾಹಿತ್ಯ ಸಾರಸ್ವತ ಲೋಕದಲ್ಲಿ ವಚನಸಾಹಿತ್ಯ ಮತ್ತು ದಾಸಸಾಹಿತ್ಯಗಳೆರಡೂ ಅಪೂರ್ವವಾದುವು. ವಚನಗಳಲ್ಲಿ ಬದುಕಿನ ಮೌಲ್ಯಗಳಿದ್ದು, ಎಲ್ಲರೂ ವಚನಗಳನ್ನು ಓದಿ ಅರ್ಥೈಸಿಕೊಳ್ಳಬೇಕು. ಮಕ್ಕಳಲ್ಲಿ ಓದಿನಲ್ಲಿ ಆಸಕ್ತಿ ಹೆಚ್ಚಬೇಕಿದೆ ಎಂದರು.
ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಹಳಕಟ್ಟಿ ಅವರು ವಚನಗಳನ್ನು ಸಂಗ್ರಹಿಸಿ ಸಂಶೋಧನೆ ಮತ್ತು ಮುದ್ರಣ ಕಾರ್ಯಕ್ಕೆ ಮುಂದಾಗದಿದ್ದರೆ ವಚನಸಾಹಿತ್ಯವು ಉಳಿಯುತ್ತಿರಲಿಲ್ಲ ಎಂದರು.
ಸಂಭ್ರಮ ಶನಿವಾರದ ಅಂಗವಾಗಿ ವಚನಗಾಯನ, ಭಾವಗೀತೆ ಗಾಯನ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು. ಎಲ್ಲ ವಿದ್ಯಾರ್ಥಿಗಳಿಗೆ ನೋಟ್‌ಪುಸ್ತಕ, ಲೇಖನಸಾಮಗ್ರಿಗಳನ್ನು ವಿತರಿಸಲಾಯಿತು.