

ಗುಂಡ್ಲುಪೇಟೆ: ವಚನ ಹೃದಯ ಕೃತಿಯ ಮೂಲಕ ಬಸವಾನಂದ ಶ್ರೀಗಳು ನಾಮಾಂಕಿತಗಳಿಂದ ವಚನಕಾರರ ಹಿನ್ನೆಲೆಗಳನ್ನು ನಿಖರವಾಗಿ ಗುರುತಿಸುವ ಕೆಲಸ ಮಾಡಿದ್ದಾರೆ ಎಂದು ಪಡಗೂರು ಅಡವಿ ಮಠದ ಪೀಠಾಧ್ಯಕ್ಷ ಶ್ರೀ ಶಿವಲಿಂಗೇಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಮಂಗಳವಾರ ಬಿಎಸ್‌ಎನ್ ಸ್ನೇಹ ಬಳಗದ ವತಿಯಿಂದ ಆಯೋಜಿಸಿದ್ದ ಧಾರವಾಡದ ಮನಗಂಡಿಯ ಶ್ರೀ ಬಸವಾನಂದ ಸ್ವಾಮೀಜಿ ಅವರು ಬರೆದಿರುವ ‘ವಚನ ಹೃದಯ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಪ್ರತಿಯೊಬ್ಬರಿಗೂ ಒಳಗಣ್ಣಿದ್ದು ಇದನ್ನು ತೆರೆದಾಗ ಮಾತ್ರ ವಿಶಿಷ್ಟ ದೃಷ್ಟಿ ಕಾಣಬಹುದು. ಹುಟ್ಟಿನಿಂದಲೇ ದೃಷ್ಟಿಹೀನರಾಗಿರುವ ಶ್ರೀಗಳು ತಮ್ಮ ಒಳಗಣ್ಣಿನಿಂದ ಗ್ರಹಿಸಿದ ವಿಷಯಗಳಿಂದ ಬೆಳಕು ಚೆಲ್ಲುತ್ತಿದ್ದಾರೆ. 2010ರಲ್ಲಿ ಪಟ್ಟಣ ಹಾಗೂ ಚಾಮರಾಜನಗರ ತಾಲೂಕು ಕೇಂದ್ರಗಳಲ್ಲಿ ಉಪವಾಸದ ಮಹತ್ವ ತಿಳಿಸುವ ಸಲುವಾಗಿ ಒಂದು ತಿಂಗಳ ಶಿಬಿರ ನಡೆಸಿ ಸಾವಿರಾರು ಜನರ ಜೀವ ಹಾಗೂ ಜೀವನಶೈಲಿಯನ್ನು ಉತ್ತಮಗೊಳಿಸಿದ್ದರು. ನಿಸರ್ಗ ಚಿಕಿತ್ಸಾ ತಜ್ಞರಾದ ಶ್ರೀಗಳು ವಚನ ಸಾಹಿತ್ಯದ ಹಾಗೂ ವಚನಕಾರರ ನಾಮಾಂಕಿತಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿ ವಚನ ಹೃದಯ ಎಂಬ ಕೃತಿಯನ್ನು ಹೊರತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಮಾತನಾಡಿ, ಶ್ರೀಗಳು ರಾಜ್ಯಾದ್ಯಂತ ಪ್ರವಾಸ ಮಾಡಿ ನೈಸರ್ಗಿಕ ಆಹಾರ ಪದ್ಧತಿ ಹಾಗೂ ಉಪವಾಸದ ಮಹತ್ವದಿಂದ ಜೀವ ಹಾಗೂ ಜೀವನ ಸುಧಾರಣೆ ಬಗ್ಗೆ ಅರಿವು ಮೂಡಿಸುವ ಜತೆಗೆ ವಚನಗಳ ನಿಖರ ಮಾಹಿತಿಯನ್ನು ನೀಡಿದ್ದಾರೆ ಎಂದು ಹೇಳಿದರು.
ಶ್ರೀ ಬಸವಾನಂದ ಸ್ವಾಮೀಜಿ ಮಾತನಾಡಿ, ಸಿದ್ದೇಶ್ವರ ಸ್ವಾಮೀಜಿ ಕಾರ್ಯಕ್ರಮದಲ್ಲಿ ಪ್ರವಚನಕ್ಕೆಂದು ಆಯ್ಕೆ ಮಾಡಿದ ವಿಷಯದಿಂದ ವಚನಕಾರರ ಹಿನ್ನೆಲೆಗಳ ಆಳವಾದ ಅಧ್ಯಯನ ಮಾಡಿದ್ದನ್ನು ಪುಸ್ತಕ ರೂಪದಲ್ಲಿ ಹೊರತರಲಾಗಿದೆ. ಜನಪದಗಳಿಗೆ ಸಾವಿರಾರು ವರ್ಷಗಳ ಹಿನ್ನೆಲೆಯಿದ್ದರೂ ಹಿಂದೆ ಸೂಳ್ನುಡಿ, ನುಡಿಗಣನ ಎಂದು ಕರೆಯಲಾಗುತ್ತಿದ್ದ ಸಾಹಿತ್ಯವನ್ನು ಬಸವಣ್ಣನ ಅನುಭವ ಮಂಟಪದಲ್ಲಿಯೇ ಮೊದಲ ಬಾರಿಗೆ ವಚನಗಳು ಎಂದು ಕರೆಯಲಾಯಿತು. ಅನುಭವ ಮಂಟಪದಲ್ಲಿ ವಚನ ಸಾಹಿತ್ಯದ ವೈಜ್ಞಾನಿಕ ವಿವೇಚನೆ ನಡೆದಿತ್ತು. ಸಾಹಿತ್ಯಕ್ಕೆ ಮೊದಲಿಗೆ ಅಂಕಿತ ಕಲ್ಪನೆ ತಂದಿದ್ದೆ ಮಹಾಮನೆಯಲ್ಲಿ. ವಚನಕಾರರನ್ನು ಗುರುತಿಸಲು ಅಂಕಿತ ಇಟ್ಟುಕೊಳ್ಳಲಾಯಿತು. ಸಂತರು, ದಾಸರು, ತ್ಯಾಗರಾಜರು ಮತ್ತು ಮುತ್ತುಸ್ವಾಮಿ ದೀಕ್ಷಿತರು ನಾಮಾಂಕಿತ ಬಳಸಿದ್ದರು. ಇಷ್ಟಲಿಂಗ ಜನಕ ಬಸವಣ್ಣನೇ ಆಗಿದ್ದು ಯಾವುದೇ ವೇದ, ಪ್ರಾಕೃತ, ಜೈನ ಧರ್ಮಗಳಲ್ಲಿಯೂ ಇಲ್ಲದ ಹೆಣ್ಣು ಮಕ್ಕಳಿಗೆ ಸಮಾನ ದೀಕ್ಷೆ ಈತನಿಂದಲೇ ದೊರಕಿತ್ತು. ಆದ್ದರಿಂದ ಲಿಂಗಾಯತ ಧರ್ಮವು ಸಮಾನತೆ ಸಾಧಿಸಿದ ಧರ್ಮವಾಗಿತ್ತು ಎಂದು ನುಡಿದರು.
ಚಿಕ್ಕತುಪ್ಪೂರು ಶಿವಪೂಜಾ ಮಠದ ಶ್ರೀ ಚನ್ನವೀರ ಸ್ವಾಮೀಜಿ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಮೈಸೂರು ಬ್ಯಾಂಕ್ ಮಾಜಿ ನಿರ್ದೇಶಕ ಎಚ್.ಎಸ್.ಪ್ರಭುಸ್ವಾಮಿ, ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷ ಎಸ್.ನಾಗೇಂದ್ರ, ಯೋಗೇಂದ್ರ ಇದ್ದರು.
ಅಂತರಂಗದಲ್ಲಿ ಕಾಣುವ ಸತ್ಯ
ಮೈಸೂರು ಬಿಜಿಎಸ್ ಕಾಲೇಜಿನ ಉಪನ್ಯಾಸಕ ಡಾ.ಎಚ್.ಬಿ.ಬೆಟ್ಟಸ್ವಾಮಿ ಮಾತನಾಡಿ, ಶ್ರೀಗಳು ಕೃತಿಯಲ್ಲಿ 37 ವಚನಕಾರರ ನಾಮಾಂಕಿತ, ಕಾಲಘಟ್ಟ ಹಾಗೂ ಐತಿಹಾಸಿಕ ಸತ್ಯವನ್ನು ದಾಖಲಿಸಿದ್ದಾರೆ. ಆಧ್ಯಾತ್ಮಿಕ ಆಯಾಮಗಳ ಕವಲುಗಳನ್ನು ನೇರವಾಗಿ ಬಿಂಬಿಸಿದ್ದಾರೆ. ವಚನಗಳು ಇನ್ನೂ ಏಕೆ ಪ್ರಸ್ತುತವಾಗುತ್ತಿವೆ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಬಾಹ್ಯ ದೃಷ್ಟಿಯಿಲ್ಲದಿದ್ದರೂ ಒಳಗಣ್ಣಿನ ಮೂಲಕ ಅಂತರಂಗದಲ್ಲಿ ಕಾಣುವ ಸತ್ಯವನ್ನು ಹೊರಗೆ ಹಾಕಿದ್ದಾರೆ ಎಂದು ಹೇಳಿದರು.