ವಕ್ಫ್ ಹೆಸರಿಗೆ ಶಾಲೆ ಜಾಗ

Published on

ಹಳೇಬೀಡು: ಹಳೇಬೀಡು ಹೋಬಳಿಯಲ್ಲೂ ವಕ್ಫ್ ಹೆಸರಿಗೆ ಶಾಲೆ ಜಾಗ ಹಸ್ತಾಂತರವಾಗಿದೆ ಎಂದು ಬೇಲೂರು ಶಾಸಕ ಎಚ್.ಕೆ.ಸುರೇಶ್ ಆರೋಪಿಸಿದರು.

ಮಂಗಳವಾರ ಹಳೇಬೀಡಿನ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಬೇಲೂರು ತಾಲೂಕು ಹಳೇಬೀಡು ಹೋಬಳಿ ಘಟ್ಟದಹಳ್ಳಿಯ ಶಾಲೆ ಪಹಣಿಯಲ್ಲಿ ವಕ್ಫ್ ಹೆಸರು ಸೇರಿರುವುದು ಆತಂಕ ಉಂಟು ಮಾಡಿದೆ. ವಿಜಯಪುರ, ಮಂಡ್ಯ, ಬೀದರ್, ಯಾದಗಿರಿ ಮತ್ತಿತರ ಜಿಲ್ಲೆಗಳಲ್ಲದೆ ಹಾಸನ ಜಿಲ್ಲೆಯಲ್ಲೂ ಪ್ರಕರಣ ಬೆಳಕಿಗೆ ಬಂದಿದೆ. ಇದಕ್ಕೆ ರಾಜ್ಯ ಸರ್ಕಾರವೇ ಕಾರಣ. ಭೂದಾನ ಮಾಡಿದ ಶಾಲೆಯ ಆಸ್ತಿಯ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದ್ದು ಈ ಪ್ರಮಾದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಿದೆ. ಸರ್ಕಾರಿ ಜಾಗ, ಬಡವರ ಜಮೀನುಗಳು ತಾವಾಗಿಯೇ ವಕ್ಫ್ ಬೋರ್ಡ್‌ಗೆ ಸೇರುವುದಿಲ್ಲ. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಕ್ಫ್ ಸಚಿವ ಜಮೀರ್ ಅಹಮದ್ ಅವರ ಕೈವಾಡವಿದೆ ಎಂದು ದೂರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈ ಎಲ್ಲ ಅವಾಂತರಗಳಿಗೂ ಕಾರಣ. ಒಂದು ಸಮುದಾಯವನ್ನು ಓಲೈಸಲು ಈ ರೀತಿಯ ಕೆಟ್ಟ ರಾಜಕಾರಣ ಮಾಡುತ್ತಿದ್ದಾರೆ. ರೈತರು, ಮಠ ಮಂದಿರ ಮತ್ತು ಶಾಲೆಗಳ ಜಮೀನು ವಕ್ಫ್‌ಗೆ ಸೇರುವುದು ಹೇಗೆ ಸಾಧ್ಯ. ಶಾಲೆಗೆಂದು ದಾನ ನೀಡಿರುವ ಜಮೀನನ್ನು ಬಿಡದಷ್ಟು ಕ್ರೂರ ಮನಸ್ಥಿತಿಯ ಸರ್ಕಾರ ಇದಾಗಿದೆ ಎಂದು ವಾಗ್ದಾಳಿ ನಡೆಸಿದರು.

ಘಟದಹಳ್ಳಿ ಗ್ರಾಮದ ಸರ್ವೇ ನಂ.435ರ ಪಹಣಿಯಲ್ಲಿ 38 ಗುಂಟೆ ಭೂದಾನ ಶಾಲೆಗೆ ಎಂದಿದೆ. ಆದರೆ, ಇತ್ತೀಚೆಗೆ ಆ ಜಾಗವನ್ನು ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ. ಶಾಲೆಗಾಗಿ ಮೀಸಲಿಟ್ಟ ಸ್ಥಳವನ್ನೆ ಹೀಗೆ ಬದಲಾವಣೆ ಮಾಡಿದರೆ ಇನ್ನು ಸಾಮಾನ್ಯ ರೈತರ ಆಸ್ತಿ ಏನಾಗಿರಬಹುದು. ಈಗಾಗಲೇ ಸರ್ಕಾರ ರೈತರ ಜಮೀನನ್ನು ಅನ್ಯರಿಗೆ ಬರೆದು ಕೊಡಲು ಹುನ್ನಾರ ನಡೆಸುತ್ತಿದ್ದು ತಾಲೂಕಿನ ಅನ್ನದಾತರು ವಿಳಂಬ ಮಾಡದೆ ತಮ್ಮ ಜಮೀನಿನ ಪಹಣಿಯನ್ನು ಪರೀಕ್ಷಿಸಿಕೊಳ್ಳಬೇಕು. ಪಹಣಿಯಲ್ಲಿ ವ್ಯತ್ಯಾಸವಾಗಿದ್ದರೆ ನನ್ನ ಗಮನಕ್ಕೆ ತರಬೇಕು. ಯಾವ ಕಾರಣಕ್ಕೂ ಅನ್ನದಾತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದರು.

ನೋಟಿಫಿಕೇಷನ್ ರದ್ದುಪಡಿಸಿ:

ಕೇವಲ ಉಪಚುನಾವಣೆಯ ಕಾರಣದಿಂದ ರೈತರಿಗೆ ನೀಡಿರುವ ನೋಟಿಸ್ ಅನ್ನು ಸರ್ಕಾರ ಹಿಂಪಡೆಯುವ ನಾಟಕ ಮಾಡುತ್ತಿದೆ. ಇದು ರೈತರ ಕಣ್ಣೊರೆಸುವ ತಂತ್ರವಾಗಿದ್ದು ಸಚಿವ ಜಮೀರ್ ಅಹಮದ್ ಈ ರೀತಿಯ ಇಬ್ಬಗೆಯ ನೀತಿಯನ್ನು ಬಿಟ್ಟು ಗೆಜೆಟ್ ಅಧಿಸೂಚನೆ ತೆಗೆದು ಹಾಕಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹದ ಮೂಲಕ ಹೋರಾಟ ತೀವ್ರಗೊಳಿಸಲಾಗುವುದು ಎಂದರು.

ಕಾಂಗ್ರೆಸ್ ಸರ್ಕಾರ ಒಂದು ಕೋಮಿನ ಓಲೈಕೆಗಾಗಿ ವಿವಿಧ ರೀತಿಯ ಕಸರತ್ತು ಮಾಡುತ್ತಿದ್ದು, ಇದು ಉಪಚುನಾವಣೆ ಗೆಲ್ಲುವ ಮತ್ತು ಅಧಿಕಾರದಲ್ಲಿ ಇರುವ ದೊಡ್ಡ ಹುನ್ನಾರವಾಗಿದೆ. ರಾಜ್ಯದಲ್ಲಿ ಹಿಂದುಗಳಿಗೆ ಭದ್ರತೆ ಇಲ್ಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೇಲೂರು ತಾಲೂಕು ವೀರಶೈವ ಯುವ ಘಟಕದ ಅಧ್ಯಕ್ಷ ಚೇತನ್, ಮುಖಂಡ ವಿನಯ್, ರಂಜಿತ್ ದಾಸ್, ಪ್ರಸನ್ನ ಕುಮಾರ್, ಕೃಷ್ಣ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net