

ಬಾಗಲಕೋಟೆ: ವಿಜಯಪುರದಿಂದ ಬಾಗಲಕೋಟೆ ಮಾರ್ಗವಾಗಿ ಬೆಂಗಳೂರಿಗೆ ವಂದೇ ಭಾರತ ರೈಲು ಸೇವೆ ಪ್ರಾರಂಭಿಸಲು ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಶಾಸಕ ಸುನಿಲಗೌಡ ಪಾಟೀಲ ಅವರು ಬಾಗಲಕೋಟೆ ಸಂಸದ ಪಿ. ಸಿ. ಗದ್ದಿಗೌಡರ ಅವರಿಗೆ ಮತ್ತೊಮ್ಮೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಸತತ 5ನೇ ಬಾರಿಗೆ ಸಂಸದರಾಗಿರುವ ಪಿ. ಸಿ. ಗದ್ದಿಗೌಡರ ಅವರಿಗೆ 24.11.2023ರಂದು ಪತ್ರ ಬರೆದು ಈ ಕುರಿತು ಮನವಿ ಮಾಡಿದ್ದೆ. ಆದರೆ, ಅವರು ಸ್ಪಂದಿಸಲಿಲ್ಲ. ಆದರೂ, ಜಿಲ್ಲೆಯ ಮತದಾರರು ತಮ್ಮನ್ನು ಪುನರಾಯ್ಕೆ ಮಾಡಿದ್ದಾರೆ. ತಮ್ಮ ಪರ ಮತ ಹಾಕಿರುವ ಮತದಾರರ ಋಣ ತೀರಿಸುವ ಸಲುವಾಗಿಯಾದರೂ ಸಂಸದರು ವಂದೇ ಭಾರತ ರೈಲು ಸೇವೆ ಪ್ರಾರಂಭಿಸಲು ಶ್ರಮಿಸಬೇಕು. ಈಗಾಗಲೇ ನಮ್ಮ ನೆರೆಯ ಜಿಲ್ಲೆಗಳಾದ ಕಲಬುರಗಿ, ಬೆಳಗಾವಿ, ಧಾರವಾಡ ಸೇರಿದಂತೆ ಎಲ್ಲ ಜಿಲ್ಲೆಗಳಿಂದ ಈ ರೈಲು ಸೇವೆ ಲಭ್ಯವಿದೆ. ಆದರೆ, ಅಖಂಡ ವಿಜಯಪುರ ಜಿಲ್ಲೆಯಿಂದ ಇನ್ನೂ ವಂದೇ ಭಾರತ ರೈಲು ಪ್ರಾರಂಭವಾಗಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಉಭಯ ಜಿಲ್ಲೆಗಳ ಜನರಿಂದ ಸಾಕಷ್ಟು ಬೇಡಿಕೆ ಬರುತ್ತಿದ್ದರೂ ನೀವು ಕಣ್ಮುಚ್ಚಿ ಕುಳಿತಿರುವಂತಿದೆ. ತಾವುಗಳು ಈ ರೈಲು ಸೇವೆ ಪ್ರಾರಂಭಿಸಲು ಕ್ರಮ ಕೈಗೊಂಡರೆ ಉಭಯ ಜಿಲ್ಲೆಗಳಲ್ಲಿ ತಮ್ಮ ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ. ಈ ರೈಲು ಸೇವೆ ಪ್ರಾರಂಭವಾದ ತಕ್ಷಣ ಸಂಸದರಾದ ಪಿ. ಸಿ. ಗದ್ದಿಗೌಡರ ಅವರನ್ನು ಬಾಗಲಕೋಟ ಜಿಲ್ಲೆಯ ಜನರ ಪರವಾಗಿ ನಾಗರಿಕ ಸನ್ಮಾನ ಮಾಡಲಾಗುವುದು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಈಗ ವಿಜಯಪುರ-ಬಾಗಲಕೋಟ- ಬೆಂಗಳೂರಿಗೆ ಹೋಗಲು ರೈಲು ಸೇವೆ ಇದ್ದರೂ ಈ ರೈಲುಗಳು ಸರಿಯಾದ ಸಮಯಕ್ಕೆ ನಿಗದಿತ ಸ್ಥಳಗಳನ್ನು ತಲುಪಲಾಗುತ್ತಿಲ್ಲ. ಬೆಂಗಳೂರಿಗೆ ಜಿಲ್ಲೆಯ ಜನರು ದಿನನಿತ್ಯದ ವ್ಯವಹಾರ ಸಂಬಂಧಿ ಮತ್ತು ಸರಕಾರಿ ಕಚೇರಿ ಕೆಲಸಗಳಿಗಾಗಿ ಬೆಂಗಳೂರಿಗೆ ಹೋಗಿ- ಬರುವ ಜನರಿಗೆ ತೊಂದರೆಯಾಗಿದೆ. ಅಲ್ಲದೇ, ಬೆಂಗಳೂರಿನಿಂದ ಬಾಗಲಕೋಟೆ-ವಿಜಯಪುರ ಬರುವ ರೈಲುಗಳ ಸಂಚಾರ ಸಮಯವೂ ಸಹ ಹೆಚ್ಚಾಗಿದೆ. ಉಭಯ ಜಿಲ್ಲೆಗಳಿಂದ ಸಾಕಷ್ಟು ಜನ ಯುವಕರು ಉದ್ಯೋಗ ಅರಸಿ ಬೆಂಗಳೂರಿನಲ್ಲಿ ನೆಲಸಿರುತ್ತಾರೆ. ಹಬ್ಬಗಳು ಮತ್ತು ಸಾಲುಸಾಲು ರಜೆಗಳು ಇರುವ ಸಂದರ್ಭದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವುದರಿಂದ ಖಾಸಗಿ ಸಾರಿಗೆ ಸಂಸ್ಥೆಗಳು ಪ್ರಯಾಣ ದರವನ್ನು ಎರಡರಿಂದ ಮೂರು ಪಟ್ಟು ಹೆಚ್ಚಳ ಮಾಡುತ್ತಾರೆ. ಇದರಿಂದ ಬೆಂಗಳೂರಿನಲ್ಲಿ ಕೆಲಸ ಮಾಡುವ ಯುವಕರು, ಕಾರ್ಮಿಕರು ಮತ್ತು ಇತರೆ ಸಾರ್ವಜನಿಕರಿಗೆ ತುಂಬಾ ಹೊರೆಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ರೈಲು ಸೇವೆ ಪ್ರಾರಂಭಕ್ಕೆ ಕ್ರಮ ಕೈಗೊಂಡರೆ, ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ. ವ್ಯಾಪಾರ ವಹಿವಾಟಿಗೂ ಸಾಕಷ್ಟು ಪ್ರೋತ್ಸಾಹ ಸಿಗಲಿದೆ. ಅಲ್ಲದೇ, ಈ ಭಾಗದಲ್ಲಿ ಆರ್ಥಿಕ ಅಭಿವೃದ್ಧಿಯೂ ಆಗಲಿದೆ. ಈಗಲಾದರೂ ತಾವು ಎಚ್ಚೆತ್ತುಕೊಂಡು ಅರಣ್ಯರೋಧನವಾಗಿರುವ ಈ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಬೇಕು. ಇಲ್ಲದಿದ್ದರೆ, ತಮಗೆ ಮತಹಾಕಿ ಮತ್ತೆ ಅಧಿಕಾರ ನೀಡಿರುವ ಮತದಾರರನ್ನು ಕೇವಲ ಮತಗಳಿಕೆಗಷ್ಟೇ ಸೀಮಿತಗೊಳಿಸಿದಂತಾಗುತ್ತದೆ. ಆದ್ದರಿಂದ, ಈ ನಿಟ್ಟಿನಲ್ಲಿ ಕೂಡಲೇ ಕಾರ್ಯೋನ್ಮುಖರಾಗುವಂತೆ ಸಂಸದ ಪಿ. ಸಿ. ಗದ್ದಿಗೌಡರ ಅವರಲ್ಲಿ ಕಳಕಳಿಯ ಮನವಿ ಮಾಡುವುದಾಗಿ ವಿಧಾನ ಪರಿಷತ ಶಾಸಕರು ಜೂನ್ 18 ರಂದು ಬರೆದ ಪತ್ರದಲ್ಲಿ ತಿಳಿಸಿದ್ದಾರೆ.