ವಂಚನೆ ಪ್ರಕರಣದ ಆರೋಪಿಗಳ ಬಂಧನ

04 YLP Venugopal reddi
Published on

ಯಲ್ಲಾಪುರ: ಎರಡು ಪ್ರತ್ಯೇಕ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಅಂತರ ರಾಜ್ಯ ಕಳ್ಳರನ್ನು ಞುಲ್ಲಾಪುರ ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಮಂಜುನಾಥ ಬಿ.ಎಸ್ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವೇಣುಗೋಪಾಲ ಕೃಷ್ಣ ರೆಡ್ಡಿ ಬಂಧಿತರು.

ಮಂಜುನಾಥ ಬಿ.ಎಸ್ ಎಂಬಾತ ಕಳೆದ ಜುಲೈನಲ್ಲಿ ಪಟ್ಟಣದಲ್ಲಿ ಕೆಲವರಿಗೆ ಹೊಸ ಇನೋವಾ ಕಾರನ್ನು ಕಡಿಮೆ ದರದಲ್ಲಿ ನೀಡುವುದಾಗಿ ಹೇಳಿ, ಹಣ ಪಡೆದುಕೊಂಡಿದ್ದ. ಆದರೆ ಕಾರನ್ನೂ ಕೊಡದೇ, ಹಣವನ್ನೂ ನೀಡದೇ ವಂಚಿಸಿದ ಕುರಿತು ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಈತನಿಂದ ಕೃತ್ಯಕ್ಕೆ ಬಳಸುತ್ತಿದ್ದ ಕಾರು ಹಾಗೂ 2.30 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ಈತ ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿಯೂ ಇದೇ ಮಾದರಿಯಲ್ಲಿ ವಂಚನೆ ಎಸಗಿರುವ ವಿಷಯ ತಿಳಿದು ಬಂದಿದೆ.

ವೇಣುಗೋಪಾಲ ಕೃಷ್ಣ ರೆಡ್ಡಿ ಕಳೆದ 2019ರ ಡಿಸೆಂಬರ್​ನಲ್ಲಿ ಯಲ್ಲಾಪುರದ ವ್ಯಕ್ತಿಯೊಬ್ಬರಿಗೆ ಎಟಿಎಂನಲ್ಲಿ ಹಣ ತೆಗೆಯಲು ಸಹಾಯ ಮಾಡುವ ನೆಪದಲ್ಲಿ ಅವರಿಂದ ಕಾರ್ಡ್ ಪಡೆದು, ಅದನ್ನು ಬದಲಿಸಿ ಬೇರೆ ಕಾರ್ಡನ್ನು ಅವರಿಗೆ ನೀಡಿದ್ದ. ನಂತರ ಅವರ ಕಾರ್ಡ್ ಬಳಸಿ 40,000 ರೂ. ಹಣ ಡ್ರಾ ಮಾಡಿದ್ದ. ಈ ಕುರಿತು ಪ್ರಕರಣ ದಾಖಲಾಗಿತ್ತು. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆತನಿಂದ 18,880 ನಗದು ವಶಪಡಿಸಿಕೊಳ್ಳಲಾಗಿದೆ. ಗೌರಿಬಿದನೂರು, ಮಧುಗಿರಿ, ಬಾಗೇಪಲ್ಲಿ, ಮಡಿವಾಳ, ಆಂಧ್ರಪ್ರದೇಶದ ಚಿತ್ತೂರುಗಳಲ್ಲಿಯೂ ಈತನ ವಿರುದ್ಧ ಇದೇ ಮಾದರಿಯ ಪ್ರಕರಣಗಳು ದಾಖಲಾಗಿರುವ ಕುರಿತು ವಿಚಾರಣೆಯಲ್ಲಿ ಮಾಹಿತಿ ಬಹಿರಂಗಗೊಂಡಿದೆ.

ಎಸ್​ಪಿ ಶಿವಪ್ರಕಾಶ ದೇವರಾಜು, ಡಿಎಸ್​ಪಿ ಜಿ. ಟಿ. ನಾಯಕ ಮಾರ್ಗದರ್ಶನದಲ್ಲಿ ಸಿಪಿಐ ಸುರೇಶ ಯಳ್ಳೂರ ನೇತೃತ್ವದಲ್ಲಿ ಪಿಎಸ್​ಐಗಳಾದ ಮಂಜುನಾಥ ಗೌಡರ್, ಭೀಮಸಿಂಗ್ ಲಮಾಣಿ, ಸಿಬ್ಬಂದಿ ಬಸವರಾಜ ಹಗರಿ, ಮಹಮ್ಮದ್ ಶಫಿ, ಗಜಾನನ ನಾಯ್ಕ, ಸಿಪಿಸಿ ವಿನೋದ ರೆಡ್ಡಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net