

ಹಾವೇರಿ: 2019-20ನೇ ಸಾಲಿನಲ್ಲಿ ಕವಿವಿಯ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್, ಸ್ಟೈಫಂಡ್, ಪ್ರೋತ್ಸಾಹ ಧನ ಸೇರಿದಂತೆ ವಿವಿಧ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ತಾಲೂಕಿನ ಕೆರಿಮತ್ತಿಹಳ್ಳಿಯ ಕವಿವಿ ಸ್ನಾತಕೋತ್ತರ ಕೇಂದ್ರದ ಎದುರು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಈಗಾಗಲೇ ವಿಶ್ವವಿದ್ಯಾಲಯದ ಎದುರು ಶಾಂತಿಯುತ ಹೋರಾಟ ನಡೆಸಲಾಗಿದೆ. ಆದರೂ, ಇದುವರೆಗೂ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ. ಈ ಹಿಂದೆ ಪ್ರಭಾರ ಕುಲಪತಿಗಳಾಗಿದ್ದ ಎ.ಎಸ್. ಶಿರಾಳಶೆಟ್ಟಿ ಹಾಗೂ ಟಿ.ಎಂ. ಭಾಸ್ಕರ ಅವರ ಅವಧಿಯಲ್ಲಿ ಪ್ರತಿಭಟನೆ ಮಾಡಿ ಮನವಿ ಮಾಡಿದಾಗ, ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಭರವಸೆ ಇನ್ನೂ ಈಡೇರಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು.
ವಿದ್ಯಾರ್ಥಿಗಳ 6 ತಿಂಗಳ ಸ್ಟೈಫಂಡ್ ಕೂಡಲೇ ನೀಡಬೇಕು. ವಿದ್ಯಾರ್ಥಿಗಳ ಕಿರು ಪ್ರಬಂಧಕ್ಕೆ ಪ್ರೋತ್ಸಾಹ ಧನ ವಿತರಿಸಬೇಕು. ಕಿರು ಪ್ರಬಂಧ ಕಡ್ಡಾಯ ಇರುವುದರಿಂದ ಪ್ರವಾಸಕ್ಕಾಗಿ ಖರ್ಚು ಮಾಡಿದ ಹಣ ನೀಡಬೇಕು ಎಂದು ಒತ್ತಾಯಿಸಿ ಕೇಂದ್ರದ ಪ್ರಭಾರ ಆಡಳಿತಾಧಿಕಾರಿ ಎಚ್.ವೈ. ಪ್ರಶಾಂತ ಅವರಿಗೆ ಮನವಿ ಸಲ್ಲಿಸಲಾಯಿತು.
ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ, ಮುಖಂಡರಾದ ಅರುಣ ಆರೇರ, ಸಂತೋಷ ಮೆಟಗುಪ್ಪಿ, ಹನುಮಂತ ನಾಯಕರ, ಸಂತೋಷ ಬಸವನಾಯಕರ, ಮಲ್ಲಿಕಾರ್ಜುನ ಪೂಜಾರ, ವಿನಾಯಕ ಪೂಜಾರಿ, ಬಸವರಾಜ ದೀಪಾವಳಿ, ಸಂದೀಪ, ಚಂದ್ರುಗೌಡ, ಮಹದೇವ, ಶ್ರೀಕಾಂತ ಕಾಳೆ, ಶ್ರುತಿ ಅಂಗಡಿ, ಲತಾ ಎಚ್., ಸರಸ್ವತಿ ನಡುವಿನಮನಿ, ಸುಮಾ ಕರೆಮಮ್ಮನವರ, ರೇಣುಕಾ ಎಸ್, ಮಂಗಳಾ ಡಿ., ಇತರರು ಪ್ರತಿಭಟನೆಯಲ್ಲಿದ್ದರು.