

ಬಾಗಲಕೋಟೆ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಪಡೆದು, ದೇಶದಲ್ಲಿ ಎನ್ ಡಿಎ ಸರ್ಕಾರ ಬಂದು ನರೇಂದ್ರ ಮೋದಿ ಮತ್ತೆ ಪ್ರಧಾನಿ ಆದರೆ ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿ ಕಾಂಗ್ರೆಸ್ ವಿಭಜನೆ ಆಗಲಿದೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ.
ಜಿಲ್ಲೆಯ ಜಮಖಂಡಿಯಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದರು. ಕರ್ನಾಟಕದಲ್ಲಿ ಈ ಸರ್ಕಾರ ಮೆಜಾರಿಟಿ ಬಂದಗಿನಿಂದ ಸಿಎಂ ಮಾಡುವಾಗಿಂದಲೂ ಭಿನ್ನಾಭಿಪ್ರಾಯ ಪ್ರಾರಂಭವಾಗಿದೆ. ಮುಖ್ಯಮಂತ್ರಿ ಆಯ್ಕೆ ಮಾಡುವ ಒಂದು ಹಂತದಲ್ಲಿ ತಮ್ಮನ್ನ ಸಿಎಂ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಕೋಪ ಮಾಡಿಕೊಂಡು ವಾಪಸ್ಸು ಬರುತ್ತಿದ್ದರು. ಆಗ ಅವರನ್ನ ಸಮಾಧಾನ ಮಾಡಿ ಕರಾರು ಕಂಡಿಶನ್ ಮೇಲೆ ಮುಖ್ಯಮಂತ್ರಿ ಮಾಡಿದ್ದಾರೆಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಬೊಮ್ನಾಯಿ ಹೇಳಿದರು.
ಖ್ಯಮಂತ್ರಿ ಆಗಿ ಒಂದೇ ತಿಂಗಳಲ್ಲಿ ಅನುಮಾನ ಬರುವ ರೀತಿಯಲ್ಲಿ ಸಂಪುಟದ ಕೆಲ ಸಚಿವರು ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಎಂದು ಹೇಳಲು ಶುರು ಮಾಡಿದರು. ಆದರೆ, ಈ ವರೆಗೂ ಒಮ್ಮೆಯಾದರೂ ಸಿದ್ದರಾಮಯ್ಯ ಅವರು ಎಲ್ಕಿಯಾದರೂ ಹೌದು, ಐದು ವರ್ಷ ನಾನೇ ಸಿಎಂ ಹೇಳಿದ್ದಾರಾ? ಎಲ್ಲೂ ಹೇಳಿಲ್ಲ. ಏನಿದರ ಅರ್ಥ? ಒಳಗಡೆ ಏನು ನಡೆಯುತ್ತದೆ ಎಂದು ಬೊಮ್ಮಾಯಿ ಅನುಮಾನ ಹೊರಹಾಕಿದ್ದಾರೆ.
ಇದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ ಅಲ್ಲ. ಸಿಎಂ ವಿಚಾರ ರಾಜ್ಯದ ಜನರಿಗೆ ಗೊತ್ತಾಗಬೇಕಾದ ವಿಷಯ. ಇನ್ನು ಮೂವರು ಡಿಸಿಎಂ ವಿಚಾರ ಎತ್ತಿ ಅವರ ಬುಡಕ್ಕೆ ಇವರು, ಇವರ ಬುಡಕ್ಕೆ ಅವರು ಇಡೋಕೆ ನೋಡುತ್ತಿದ್ದಾರೆ. ಈ ನಡುವೆ ಶಾಸಕರು ನಮ್ಮನ್ನ ಕೇಳೋರಿಲ್ಲ ಹೇಳೋರಿಲ್ಲ. ಕ್ಷೇತ್ರದ ಅಭಿವೃದ್ದಿ ಆಗುತ್ತಿಲ್ಲ ಎನ್ನುತ್ತಿದ್ದಾರೆ. ಈ ಸರ್ಕಾರ ಗೊಂದಲ ಗೂಡಾಗಿದೆ. ಭಿನ್ನಾಭಿಪ್ರಾಯ ಸ್ವಲ್ಪ ದಿನಗಳಲ್ಲೆ ಸ್ಪೋಟ ಆಗಲಿದೆ ಎಂದು ಮಾಜಿ ಸಿಎಂ ತಿಳಿಸಿದ್ದಾರೆ.