ಲೀಲಮ್ಮನ ಬದುಕಿನಲ್ಲಿ ಕೈ ಹಿಡಿದ ರಂಗಭೂಮಿ‌…!

bkt-8-7
ಚಿತ್ತರಗಿ ಗಂಗಾಧರ ಶಾಸ್ತ್ರಿಗಳು.
Published on

ಬಾಗಲಕೋಟೆ: ಹಸಿವಿನಿಂದ ಬಳಲುತ್ತಿದ್ದ ಲೀಲಾವತಿಗೆ ಚಹಾ ಮಾಡಿಕೊಳ್ಳಲು ಹಾಲು ಖರೀದಿಗೆ ದುಡ್ಡು ಇರಲಿಲ್ಲ. ಹೀಗಾಗಿ ಕುಡಿದಿದ್ದು ಡಿಕಾಕ್ಷನ ಮಾತ್ರ. ಕೋಳಿ ಮೊಟ್ಟೆ ತಿನ್ನುವ ಆಸೆ. ಮೊಟ್ಟೆ ಕೊಳ್ಳಲು ಕಾಸು ಇರಲಿಲ್ಲ. ಆಗ ತಿಂದಿದ್ದು ಬಾತು ಕೋಳಿಯ ಮೊಟ್ಟೆ….!!

ಇಂತಹ ಸಂಕಷ್ಟದ ಸಂದರ್ಭದಲ್ಲಿ, ಹಸಿವು ನೀಗಿಸಿದ್ದು ಹೊಟ್ಟೆ ತುಂಬ ಮೊಟ್ಟೆ ತಿನ್ನುವಂತೆ ಮಾಡಿದ್ದು. ಜೀವನದಲ್ಲಿ ಎಂದು ಕಂಡರಿಯದಷ್ಟು ೫೦ ಸಾವಿರ ರೂ. ನೋಟಿನ ಕಂತೆ ನೋಡಿದ್ದು ಬಾಗಲಕೋಟೆ ಜಿಲ್ಲೆಯಲ್ಲಿ. ಅಂದಿನ ಆ ೫೦ ಸಾವಿರ ರೂ. ಇಂದು ಲೀಲಮ್ಮ ಬಳಿ ಇರುವ ಹಲವು ಕೋಟಿ ರೂ. ಆಸ್ತಿ ಉಳಿದುಕೊಳ್ಳಲು ಸಾಧ್ಯವಾಗಿದ್ದು, ಕೋಟೆನಾಡಿನ ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮದ ಕುಮಾರ ವಿಜಯ ನಾಟ್ಯ ಸಂಘದ ಮಾಲೀಕರಾದ ಗಂಗಾಧರ ಶಾಸ್ತ್ರಿಗಳು.

ಲೀಲಾವತಿ ಈ ಉಪಕಾರವನ್ನು ತಮ್ಮ ಜೀವ ಇರುವವರೆಗೂ ಮರೆಯಲಿಲ್ಲ. ತಮ್ಮ ೮೩ ವಯಸ್ಸಿನಲ್ಲಿ ಗಂಗಾಧರ ಶಾಸ್ತ್ರಿ ಶತಮಾನೋತ್ಸವ ಗ್ರಂಥದಲ್ಲಿ ಲೀಲಮ್ಮ ಇದೆಲ್ಲವನ್ನು ಸ್ಮರಿಸಿಕೊಂಡು ತಮ್ಮ ಜೀವನದ ಉಸಿರಿಗೆ ಮರುಜೀವ ಕೊಟ್ಟ ಉತ್ತರ ಕರ್ನಾಟಕದ ಜನರ ಪ್ರೀತಿ, ಕಲಾ ಪ್ರೇಮಿಗಳ ಕೊಡುಗೆಯನ್ನು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.

೫೦ ಸಾವಿರ ರೂ. ನೀಡದ್ದ ಶಾಸ್ತ್ರಿಗಳು..:
ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಉತ್ತುಂಗ ಸ್ಥಿತಿಯಲ್ಲಿದ್ದ ಲೀಲಾವತಿ ಅಮ್ಮ ಬದುಕಿನ ಕಷ್ಟದಲ್ಲಿ ಸಿಲುಕಿದ್ದರು. ಶ್ರಮಪಟ್ಟು ಹಿಡಿದ್ದ ಮದ್ರಾಸ್‌ನಲ್ಲಿ ತೋಟವು ಸಾಲದಲ್ಲಿತ್ತು. ಹಸಿವು ಕೂಡಾ ಕಣ್ಣೀರು ಹಾಕುವಂತೆ ಮಾಡಿತ್ತು. ಸಿನಿಮಾ ರಂಗದಲ್ಲಿ ಅಂದಿನ ಕಾಲದಲ್ಲಿ ದಿನಕ್ಕೆ ೨, ೩ ನೂರು ರೂ. ನೀಡಿದ್ದರೇ ಅದೇ ದೊಡ್ಡದು. ಅಂತಹ ಸಮಯದಲ್ಲಿ ತೋಟದ ಮೇಲೆ ಮಾಡಿದ್ದ ಸಾಲ ತೀರಿಸುವುದು ಖ್ಯಾತಿ ನಟಿಗೆ ಸಾಧ್ಯವಾಗಿರಲಿಲ್ಲ. ಸಿನಿಮಾದಲ್ಲಿಯೂ ಅವಕಾಶಗಳು ಕ್ಷಿಣಿಸಿದ್ದವು. ಬದುಕಿಗೆ ಆಸರೆಯಾಗಬೇಕಿದ್ದ ತೋಟವೆ ಕೈ ಬಿಟ್ಟು ಹೋಗುವ ಲಕ್ಷಣ ಗೋಚರಿಸಿತ್ತು.

ಈ ಸಂದರ್ಭದಲ್ಲಿ ಚಿತ್ತರಗಿ ಕುಮಾರ ವಿಜಯ ನಾಟ್ಯ ಸಂಘದ ಮಾಲೀಕರಾದ ಗಂಗಾಧರ ಶಾಸ್ತ್ರಿಗಳು ದಿನಕ್ಕೆ ೫೦೦ ರೂ. ದಂತೆ ಸಂಭಾವನೆ ನಿಗಧಿ ಪಡಿಸಿ ೫೦ ಸಾವಿರ ರೂ. ಇಡು ಗಂಟು ನೀಡಿ ೧೬೦ ನಾಟಕಗಳ ಒಪ್ಪಂದ ಮಾಡಿಕೊಂಡಿದ್ದರು. ಇದರಿಂದ ೧೯೬೦-೭೦ ದಶಕದಲ್ಲಿ ಕುಮಾರ ವಿಜಯ ನಾಟ್ಯ ಸಂಘದಿಂದ ಧಾರವಾಡ, ಹುಬ್ಬಳ್ಳಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ನಿರಂತರವಾಗಿ ನಡೆಯುತ್ತಿದ್ದ ಜೀವನ ಯಾತ್ರೆ, ಹೂವಿನ ಅಂಗಡಿ, ಜಗ ಜ್ಯೋತಿ ಬಸವೇಶ್ವರ, ಜೀವನ ಜ್ಯೋತಿ ಬಸವೇಶ್ವರ ವಿವಿಧ ನಾಟಕಗಳಲ್ಲಿ ಲೀಲಾವತಿ ಅತಿಥಿ ಹಾಗೂ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿಸಿದ್ದರು. ಇದರಿಂದ ಸಿನೆಮಾಗಳು ಅಬ್ಬರಿಸುತ್ತಿದ್ದ ಕಾಲದಲ್ಲಿ ಸೊರಗಿದ್ದ ನಾಟಕ ಕಂಪನಿಗಳು ಲೀಲಾವತಿ ಅವರ ಆಗಮನದಿಂದ ಪ್ರೇಕ್ಷಕರ ಗ್ಯಾಲರಿ ತುಂಬಿ ತುಳುಕಿತ್ತು. ಕಂಪನಿಗಳಿಗೂ ಆರ್ಥಿಕ ಭದ್ರತೆ ಒದಗಿಸಿತ್ತು.

ಈ ಧನ ಸಹಾಯದಿಂದ ಮದ್ರಾಸ್‌ನಲ್ಲಿ ಲೀಲಾವತಿ ಅವರ ತೋಟ ಸಾಲದಿಂದ ಮುಕ್ತಿಯಾಯಿತು. ಭವಿಷ್ಯದಲ್ಲಿ ಅವರಿಗೆ ಕೋಟ್ಯಂತರ ರೂ. ಮೌಲ್ಯದ ಆಸ್ತಿಯಾಗಿ ಉಳಿಯಿತು. ಬಾಗಲಕೋಟೆಯೊಂದಿಗೆ ಹಿರಿಯ ನಟಿ ಲೀಲಾವತಿ ಅವರ ನಂಟು ಇಂದಿಗೂ ಮರೆಯಲು ಸಾಧ್ಯವಿಲ್ಲ. ರಂಗಭೂಮಿಯ ಇತಿಹಾಸ ಪುಟದಲ್ಲಿ ಅಚ್ಚಳಿಯದೇ ಉಳಿಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net