ಲಾರಿ-ಟಂಟಂ ಮುಖಾಮುಖಿ ಡಿಕ್ಕಿ: ಓರ್ವ ಸಾವು

Published on

ಹಾವೇರಿ: ಲಾರಿ ಹಾಗೂ ಟಂಟಂ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟು 13 ಜನ ಪ್ರಯಾಣಿಕರು ಗಾಯಗೊಂಡ ಘಟನೆ ನಗರದ ಜಿಎಚ್ ಕಾಲೇಜ್ ಬಳಿಯ ಲಕಮಾಪುರದಲ್ಲಿ ಭಾನುವಾರ ನಡೆದಿದೆ.
ಸವಣೂರಿನ ಲಕ್ಷ್ಮಣ (60) ಮೃತಪಟ್ಟವರು.
ಮೆಣಸಿನಕಾಯಿ ತುಂಬಿದ ಲಾರಿ ಹುಬ್ಬಳ್ಳಿಯಿಂದ ಕಾಗಿನೆಲೆ ಕಡೆಗೆ ಹೊರಟಿತ್ತು. ಪ್ರಯಾಣಿಕರ ತುಂಬಿಕೊಂಡ ಟಂಟಂ ಹಾವೇರಿಯಿಂದ ನಾಗನೂರ ಕಡೆಗೆ ಹೊರಟಿತ್ತು. ಈ ವೇಳೆ ಅವಘಡ ಸಂಭವಿಸಿದೆ. ಡಿಕ್ಕಿಯಾದ ರಭಸಕ್ಕೆ ಲಾರಿ ಪಲ್ಟಿಯಾಗಿದೆ. ಟಂಟಂ ಮುಂಭಾಗ ಲಾರಿಗೆ ಸಿಲುಕಿ ನುಜ್ಜುಗುಜ್ಜಾಗಿದೆ.
ಟಂಟಂ ಚಾಲಕನ ಎರಡೂ ಕಾಲು ಟಂಟಂ ಮುಂಭಾಗದಲ್ಲಿ ಸಿಲುಕಿ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಟಂಟಂನಲ್ಲಿದ್ದ ಲಕ್ಷ್ಮಣ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಲಾರಿ ಚಾಲಕ ಹಾಗೂ ಲಾರಿಯಲ್ಲಿ ಕುಳಿತಿದ್ದ ವ್ಯಕ್ತಿಗೂ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net