ಲಾಕ್​ಡೌನ್​ನಿಂದ ಸೇತುವೆ ಕಾಮಗಾರಿಗೆ ಗ್ರಹಣ

18KWR1
Published on

ವಿಜಯವಾಣಿ ಸುದ್ದಿಜಾಲ ಕಾರವಾರ: ಜಿಲ್ಲೆಯ ಹಲವು ಕುಗ್ರಾಮಗಳಿಗೆ ಈ ವರ್ಷದ ಮಳೆಗಾಲದಲ್ಲೂ ಸೇತುವೆಯ ಕನಸು ನನಸಾಗುವುದು ಅನುಮಾನ.

2019ರ ಆಗಸ್ಟ್​ನ ಪ್ರವಾಹ ಹಾಗೂ ಈಗಿನ ಕರೊನಾ ಲಾಕ್​ಡೌನ್​ನಿಂದ ಸೇತುವೆ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಮಳೆಗಾಲದವರೆಗೆ ಮತ್ತೆ ಪ್ರಾರಂಭವಾಗುವ ಯಾವುದೇ ಲಕ್ಷಣಗಳಿಲ್ಲ. ಇದರಿಂದ ಜನರ ಜಂಜಾಟ ಮುಂದುವರಿಯಲಿವೆ.

2018ರಲ್ಲಿ ಆಗಿನ ಸಿದ್ದರಾಮಯ್ಯ ಸರ್ಕಾರ ಜಿಲ್ಲೆಯಲ್ಲಿ ಒಟ್ಟು 252.77 ಕೋಟಿ ರೂ. ವೆಚ್ಚದಲ್ಲಿ 32 ಸಣ್ಣ ಹಾಗೂ ದೊಡ್ಡ ಸೇತುವೆ ಕಾಮಗಾರಿಗಳಿಗೆ ಮಂಜೂರಿ ನೀಡಿತ್ತು. ಕರಾವಳಿಯ ಕಾಳಿ, ಗಂಗಾವಳಿ, ಅಘನಾಶಿನಿ, ಶರಾವತಿ ನದಿಗಳಿಗೆ ದೊಡ್ಡ ಸೇತುವೆಗಳು, ಹಾಗೂ ಜೊಯಿಡಾ, ಹಳಿಯಾಳ, ಯಲ್ಲಾಪುರ, ಶಿರಸಿ ಭಾಗದಲ್ಲಿ ಹಲವು ಹಳ್ಳಗಳಿಗೆ ಸಣ್ಣ ಸೇತುವೆಗಳು ಈ ಪ್ಯಾಕೇಜ್​ನಲ್ಲಿ ಸೇರಿದ್ದವು.

ಕರ್ನಾಟಕ ರಾಜ್ಯ ರಸ್ತೆ ನಿರ್ಮಾಣ ನಿಗಮ (ಕೆಆರ್​ಡಿಸಿಎಲ್)ಕ್ಕೆ ಈ ಕಾಮಗಾರಿಗಳ ಜವಾಬ್ದಾರಿ ವಹಿಸಲಾಗಿತ್ತು. ಕೆಆರ್​ಡಿಸಿಎಲ್ ವಿವಿಧ ಪ್ಯಾಕೇಜ್ ಮಾಡಿ ಟೆಂಡರ್ ಕರೆದು ಕಾಮಗಾರಿಯನ್ನು ಹಂಚಿದೆ. ಮಾನಸಾ ಕನ್ಸಲ್ಟನ್ಸಿ, ಪಿಲಿಫ್ ಡಿಕೋಸ್ಟಾ ಹಾಗೂ ಡಿಆರ್​ಎನ್ ಇನ್​ಫ್ರಾಸ್ಟ್ರಕ್ಚರ್ ಕಂಪನಿಗಳು ಜಿಲ್ಲೆಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿಯ ಗುತ್ತಿಗೆ ಪಡೆದಿದ್ದವು.

ಮುಕ್ತಾಯವಾದ ಅವಧಿ: ಈ ಎಲ್ಲ ಸೇತುವೆಗಳ ನಿರ್ವಣಕ್ಕೆ 2018ರಲ್ಲಿ ಅನುಮತಿ ನೀಡಲಾಯಿತು. ಒಂದೆರಡನ್ನು ಹೊರತುಪಡಿಸಿ ಬಹುತೇಕ ಸೇತುವೆ ಕಾಮಗಾರಿಗಳು 2019 ರ ಸೆಪ್ಟೆಂಬರ್ ಒಳಗೆ ಮುಗಿಯಬೇಕಿತ್ತು. ಆದರೆ, ಹಲವು ಕಾಮಗಾರಿಗಳು ಅರ್ಧದಷ್ಟೂ ಆಗಿಲ್ಲ. ಕೆಲವು ಇನ್ನೂ ಪ್ರಾರಂಭವೇ ಆಗಿಲ್ಲ.

ನೂರೆಂಟು ಸಮಸ್ಯೆ: ಕಾರವಾರದಲ್ಲಿ ಕೆರವಡಿ ಉಳಗಾ ನಡುವೆ ಸೇತುವೆ ಕಾಮಗಾರಿ ಮಾಡುವ ಸಲುವಾಗಿ ಕಾಳಿ ನದಿಗೆ ಮಣ್ಣು ತುಂಬಲಾಗಿದೆ. ಇದರಿಂದ ಬಾರ್ಜ್ ಓಡಾಟವೂ ಸಾಧ್ಯವಾಗುತ್ತಿಲ್ಲ. ಪ್ರವಾಹದ ಸಂದರ್ಭದಲ್ಲಿ ನದಿಗೆ ತುಂಬಿದ ಮಣ್ಣು ಕೊಚ್ಚಿ ಹೋಗಿತ್ತು. ಈ ಮಳೆಗಾಲದಲ್ಲಿ ಸೇತುವೆ ಆಗದಿದ್ದಲ್ಲಿ ಓಡಾಟಕ್ಕೆ ತೀವ್ರ ತೊಂದರೆ ಉಂಟಾಗಲಿದೆ. ಅಂಕೋಲಾದ ಗಂಗಾವಳಿ ನದಿಯಲ್ಲೂ ಬಾರ್ಜ್ ಸಂಚಾರ ಬಂದ್ ಮಾಡಿ ಸೇತುವೆ ಕಾಮಗಾರಿ ಪ್ರಾರಂಭಿಸಲಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಈ ಭಾಗದ ಜನರ ಓಡಾಟಕ್ಕೆ ಸಮಸ್ಯೆಯಾಗಲಿದೆ. ಅತ್ತ ಬಾರ್ಜ್ ಇಲ್ಲ. ಇತ್ತ ಸೇತುವೆಯೂ ಇಲ್ಲ ಎಂಬಂತಾಗಲಿದೆ. ಕುಮಟಾ ತಾಲೂಕಿನ ಕತಗಾಲ ಸಮೀಪ ಸೇತುವೆ ನಿರ್ಮಾಣ ಸಂದರ್ಭದಲ್ಲಿ ಒಂದು ಎಳೆ ಮುರಿದಿದ್ದರಿಂದ ಕಾಮಗಾರಿಗೆ ವಿಳಂಬವಾಗಿದೆ.

ಪ್ರಮುಖ ಕಾಮಗಾರಿಗಳು: 28.70 ಕೋಟಿ ರೂ. ವೆಚ್ಚದ ಗಂಗಾವಳಿ-ಮಂಜಗುಣಿ ಸೇತುವೆ. 28.39 ಕೋಟಿ ರೂ. ವೆಚ್ಚದ ಉಳಗಾ -ಕೆರವಡಿ ಸೇತುವೆ. 30.61 ಕೋಟಿ ರೂ. ವೆಚ್ಚದ ಕಲವಳರ್ಕ ಸೇತುವೆ. 35.91 ಕೋಟಿ ರೂ. ವೆಚ್ಚದ ಮಾವಿನಕುರ್ವಾ ಸೇತುವೆ. 26 ಕೋಟಿ ರೂ. ವೆಚ್ಚದ ನಗರಬಸ್ತಿಕೇರಿ ಸೇತುವೆ. 22.01 ಕೋಟಿ ರೂ. ವೆಚ್ಚದ ಕೋಡ್ಕಣಿ ಸೇತುವೆ. 13.65 ಕೋಟಿ ರೂ. ವೆಚ್ಚದ ಕತಗಾಲ ಸೇತುವೆ.

ಕರೊನಾ ಲಾಕ್​ಡೌನ್​ಗೂ ಎರಡು ತಿಂಗಳ ಮುಂಚೆಯೇ ಕೆರವಡಿ-ಉಳಗಾ ಸೇತುವೆ ನಿರ್ಮಾಣ ಮಾಡುತ್ತಿರುವ ಕಾರ್ವಿುಕರು ಇದ್ದಕ್ಕಿದ್ದಂತೆ ಕಾಲ್ಕಿತ್ತಿದ್ದಾರೆ. ಏಕೆ ಕಾಮಗಾರಿ ನಿಲ್ಲಿಸಲಾಯಿತು ಎಂದು ಕೇಳಲು ಸಂಬಂಧಪಟ್ಟ ಇಲಾಖೆ ಇಂಜಿನಿಯರ್​ಗಳು ಇಲ್ಲಿಲ್ಲ. ಈ ಮಳೆಗಾಲದಲ್ಲಿ ಜನರ ಓಡಾಟಕ್ಕೆ ತೊಂದರೆಯಾಗುವ ಆತಂಕವಿದೆ. | ಪ್ರಮೀಳಾ ನಾಯ್ಕ ಕಾರವಾರ ತಾಪಂ ಅಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net