ಲಾಕ್​ಡೌನ್​ನಿಂದ 12 ಕೋಟಿ ರೂ. ಆದಾಯ ನಷ್ಟ

carona logo
Published on

ಶಿರಸಿ: ಪ್ರಧಾನಿ ಮೋದಿಯವರು ಘೊಷಿಸಿದ ಮೊದಲನೇ ಲಾಕ್​ಡೌನ್ ಅವಧಿಯಲ್ಲಿ ಎನ್​ಡಬ್ಲು್ಯಕೆಆರ್​ಟಿಸಿ ಶಿರಸಿ ವಿಭಾಗಕ್ಕೆ ಸುಮಾರು 12 ಕೋಟಿ ರೂ. ಆದಾಯ ನಷ್ಟವಾಗಿದ್ದು, ಎರಡನೇ ಲಾಕ್​ಡೌನ್ ಅವಧಿಯಲ್ಲಿ ಸುಮಾರು 400ಕ್ಕೂ ಅಧಿಕ ಮುಂಗಡ ಬುಕ್ಕಿಂಗ್​ಗಳನ್ನು ಕ್ಯಾನ್ಸಲ್ ಮಾಡಲಾಗಿದೆ.

ಮಾ. 22ರಂದು ಘೊಷಣೆ ಮಾಡಲಾಗಿದ್ದ ಜನತಾ ಕರ್ಪ್ಯೂ ನಂತರದಲ್ಲಿ ಬಸ್ ಸಂಚಾರವನ್ನು ಸಂಪೂರ್ಣ ರದ್ದು ಮಾಡಲಾಗಿತ್ತು. ಏ. 14ಕ್ಕೆ ಲಾಕ್​ಡೌನ್ ಮುಗಿದು ಬಸ್ ಸಂಚಾರ ಆರಂಭ ಆಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಮೇ 3ರವರೆಗೆ ಅದನ್ನು ವಿಸ್ತರಣೆ ಮಾಡಲಾಗಿದೆ. ಇದರಿಂದ ಮೊದಲನೇ ಹಂತದ ಲಾಕ್​ಡೌನ್​ನಿಂದಾಗಿ 11 ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿದೆ. ಸಂಸ್ಥೆಯಲ್ಲಿ 500ಕ್ಕೂ ಅಧಿಕ ಬಸ್​ಗಳಿವೆ. ಇದರಿಂದ ಕಳೆದ 24 ದಿನಗಳ ಲಾಕ್​ಡೌನ್​ನಿಂದಾಗಿ 12 ಕೋಟಿ ರೂ.ಗಳಷ್ಟು ಆದಾಯ ನಷ್ಟ ಉಂಟಾಗಿದ್ದು, ಎಲ್ಲಾ ಬಸ್​ಗಳನ್ನು ವಿಭಾಗದ 6 ಡಿಪೋಗಳಲ್ಲಿ ನಿಲ್ಲಿಸಲಾಗಿದೆ.

400 ಬುಕಿಂಗ್ ಕ್ಯಾನ್ಸಲ್:

ಮೊದಲನೇ ಹಂತದ ಲಾಕ್​ಡೌನ್ ಮುಗಿದ ಮೇಲೆ ತಮ್ಮ ಗ್ರಾಮಗಳಿಗೆ ಹಾಗೂ ಬೇರೆಬೇರೆ ಕಡೆಗಳಲ್ಲಿ ಸಂಚರಿಸಲು ಮುಂಗಡವಾಗಿ ನಿಗದಿ ಮಾಡಲಾಗಿದ್ದ ಸುಮಾರು 400ಕ್ಕೂ ಅಧಿಕ ಬುಕ್ಕಿಂಗ್ ಕ್ಯಾನ್ಸಲ್ ಮಾಡಲಾಗಿದ್ದು, ಅಂದಾಜು 2.5 ಲಕ್ಷ ರೂ.ಗಳಷ್ಟು ಆದಾಯ ನಷ್ಟ ಉಂಟಾಗಿದೆ. ಕ್ಯಾನ್ಸಲ್ ಆಗಿರುವ ಬುಕ್ಕಿಂಗ್ ಹಣವನ್ನು ಗ್ರಾಹಕರಿಗೆ ಮರಳಿ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದು, ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿದ್ದಾರೆ.

2000 ನೌಕರರಿಗೆ ರಜಾ

ಶಿರಸಿ ವಿಭಾಗದಲ್ಲಿ ಸುಮಾರು 2200 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಅವರಲ್ಲಿ 2 ಸಾವಿರಕ್ಕೂ ಅಧಿಕ ಸಿಬ್ಬಂದಿಗೆ ಅಘೊಷಿತ ರಜೆ ನೀಡಲಾಗಿದೆ. ಡಿಪೋಗಳಲ್ಲಿ ರಾತ್ರಿ ವೇಳೆ ಕರ್ತವ್ಯ ನಿರ್ವಹಿಸಲು, ಬಸ್​ಗಳನ್ನು ಚಾಲೂ ಮಾಡಿ ಬಂದ್ ಮಾಡಲು ಪಾಳಿಯ ಪ್ರಕಾರ ಇಬ್ಬರು ಚಾಲಕರನ್ನು ನೇಮಕ ಮಾಡಲಾಗಿದೆ.

ಶಿರಸಿ ವಿಭಾಗದ 6 ಡಿಪೋಗಳಲ್ಲಿ ಲಾಕ್​ಡೌನ್​ನಿಂದ ಪ್ರತಿ ದಿವಸ ಅಂದಾಜು 50 ಲಕ್ಷ ರೂ. ಆದಾಯ ನಷ್ಟವಾಗುತ್ತಿದೆ. ತುರ್ತು ಸೇವೆಯನ್ನು ಮಾತ್ರ ಪರಿಗಣಿಸಿ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಸರ್ಕಾರದ ನಿಯಮ ಪಾಲನೆ ಮಾಡಲಾಗಿದೆ. | ವಿವೇಕ ಹೆಗಡೆ ಎನ್​ಡಬ್ಲು್ಯಕೆಆರ್​ಟಿಸಿ ಶಿರಸಿ ವಿಭಾಗದ ಡಿಸಿ

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net