

ಹಾವೇರಿ: ಇದುವರೆಗೆ ಕರೊನಾ ಪಾಸಿಟಿವ್ ಕೇಸ್ ಪತ್ತೆಯಾಗದೆ ಹಸಿರು ವಲಯದಲ್ಲಿರುವ ಜಿಲ್ಲೆಯಲ್ಲಿ ವಿವಿಧ ಚಟುವಟಿಕೆಗಳು ನಿಧಾನವಾಗಿ ಗರಿಗೆದರುತ್ತಿವೆ. ಜಿಲ್ಲೆಯೊಳಗೆ ಜನ ಹಾಗೂ ವಾಹನ ಸಂಚಾರ ಹೆಚ್ಚುತ್ತಿದ್ದು, ಕೃಷಿ ಚಟುವಟಿಕೆಗಳೂ ಪ್ರಾರಂಭವಾಗಿವೆ.
ಕರೊನಾ ಮಹಾಮಾರಿ ಹರಡದಂತೆ ಕಳೆದ ಒಂದೂವರೆ ತಿಂಗಳಿಂದ ಲಾಕ್ಡೌನ್ ಘೊಷಣೆಯಾಗಿ ಎಲ್ಲ ಚಟುವಟಿಕೆಗಳು ಸಂಪೂರ್ಣ ಸ್ತಬ್ಧಗೊಂಡಿದ್ದವು. ಮನೆಯಿಂದ ಅನಗತ್ಯವಾಗಿ ಹೊರಬೀಳುವವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದರು. ದಿನಸಿ, ಔಷಧ ಸೇರಿ ತುರ್ತು ಅಗತ್ಯಗಳಿಗೆ ಮಾತ್ರವೇ ಓಡಾಟಕ್ಕೆ ಅವಕಾಶವಿತ್ತು. ಹಾವೇರಿ ಜಿಲ್ಲೆ ಹಸಿರು ವಲಯದಲ್ಲಿರುವುದರಿಂದ ಈಗ ಲಾಕ್ಡೌನ್ ನಿಯಮಗಳು ಸಡಿಲಿಕೆಯಾದ್ದು, ಜನ ಮತ್ತು ವಾಹನ ಸಂಚಾರ ಹೆಚ್ಚಿದೆ. ಕಳೆದ 2 ದಿನಗಳಿಂದ ಒಂದೊಂದೇ ವ್ಯಾಪಾರ ವಹಿವಾಟು ಆರಂಭಗೊಳ್ಳತೊಡಗಿವೆ.
ಕೃಷಿ ಚಟುವಟಿಕೆಗಳು ಶುರು: ಕಳೆದ ಕೆಲವು ದಿನಗಳ ಹಿಂದೆ ಜಿಲ್ಲೆಯಲ್ಲಿ ಒಂದೆರಡು ಬಾರಿ ಉತ್ತಮ ಮಳೆಯಾಗಿದೆ. ಮುಂಗಾರು ಹಂಗಾಮು ಸಮೀಪಿಸುತ್ತಿರುವುದರಿಂದ ಕರೊನಾ ಹರಡುವ ಭೀತಿಯಿಂದ ಮನೆಯಲ್ಲಿಯೇ ಕೂತಿದ್ದ ಕೃಷಿಕರು ಈಗ ನಿಧಾನವಾಗಿ ಹೊಲದತ್ತ ಹೆಜ್ಜೆ ಹಾಕುತ್ತಿದ್ದಾರೆ. ಇದಕ್ಕೆ ಪೂರಕವಾಗಿ ನಗರ ಪ್ರದೇಶಗಳಲ್ಲಿ ಕೃಷಿ ಸಲಕರಣೆ, ಯಂತ್ರೋಪಕರಣ ಬಿಡಿಭಾಗ, ಕೀಟನಾಶಕ, ರಸಗೊಬ್ಬರ, ಬಿತ್ತನೆ ಬೀಜದ ಅಂಗಡಿಗಳು ಪೂರ್ಣ ಪ್ರಮಾಣದಲ್ಲಿ ಬಾಗಿಲು ತೆಗೆದಿವೆ. ಇದರಿಂದ ಗ್ರಾಮೀಣ ಭಾಗದಿಂದ ನಗರಗಳಿಗೆ ಬರುವ ಜನರ ಸಂಖ್ಯೆಯೂ ಹೆಚ್ಚಿದೆ. ಹೊಲಗಳಲ್ಲಿ ಮುಂಗಾರು ಪೂರ್ವ ಚಟುವಟಿಕೆಗಳೂ ಆರಂಭವಾಗಿವೆ. ರಂಟೆ ಹೊಡೆಯುವುದು, ತಿಪ್ಪೆಗೊಬ್ಬರ ಹಾಕುವ ಕಾರ್ಯದತ್ತ ರೈತರು ಚಿತ್ತ ಹರಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೂ ಕರೊನಾ ಪಾಸಿಟಿವ್ ಪತ್ತೆಯಾಗಿಲ್ಲ. ಇದರಿಂದ ಕರೊನಾ ಆತಂಕ ಜಿಲ್ಲೆಯ ಜನರಿಂದ ನಿಧಾನವಾಗಿ ದೂರವಾಗುತ್ತಿದೆ. ಇದರೊಂದಿಗೆ ಮೊಬೈಲ್, ಇಲೆಕ್ಟ್ರಾನಿಕ್ಸ್ ಅಂಗಡಿ, ವಾಹನ ದುರಸ್ತಿ ಗ್ಯಾರೇಜ್ಗಳು ಆರಂಭವಾಗಿವೆ. ಜಿಲ್ಲೆಯಲ್ಲಿ ಆರಂಭದಿಂದಲೂ ದಿನಸಿ ಅಂಗಡಿ, ತರಕಾರಿ ಮಾರಾಟಕ್ಕೆ ಅನುಮತಿ ನೀಡಿದ್ದರಿಂದ ಯಾವುದಕ್ಕೂ ಜನ ಪರದಾಡುವಂತಾಗಿರಲಿಲ್ಲ. ಸ್ಥಳೀಯವಾಗಿ ತರಕಾರಿ, ಹಣ್ಣು ಬೆಳೆಯುವವರ ಸಂಖ್ಯೆ ಹೆಚ್ಚಿರುವುದರಿಂದ ಸ್ಥಳೀಯ ಮಾರುಕಟ್ಟೆಗೆ ಅವುಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ. ಕೃಷಿ ಉತ್ಪನ್ನ ಸಾಗಣೆಗೆ ತಡೆಯೊಡ್ಡದಂತೆ ಸರ್ಕಾರ ಸೂಚಿಸಿರುವುದರಿಂದ ರೈತರು ನೇರವಾಗಿ ಉತ್ಪನ್ನ ಮಾರಾಟಕ್ಕೆ ನಗರಗಳಿಗೆ ಬರುತ್ತಿದ್ದಾರೆ.
ಬ್ಯಾರಿಕೇಡ್ಗಳು ತೆರವು: ಜನ ಸಂಚಾರ ನಿಯಂತ್ರಿಸಲು ನಗರದಲ್ಲಿ ಅಲ್ಲಲ್ಲಿ ಹಾಕಿದ್ದ ಬ್ಯಾರಿಕೇಡ್ಗಳನ್ನು ಪೊಲೀಸ್ ಇಲಾಖೆ ತೆರವುಗೊಳಿಸಿದ್ದು, ಸಂಚಾರಕ್ಕಿದ್ದ ಅಡೆತಡೆಯೂ ಕೊನೆಯಾಗಿದೆ. ಲಾಕ್ಡೌನ್ ಆದೇಶ ಸಡಿಲಿಕೆಯಾಗಿದ್ದರೂ ಪೊಲೀಸರು ಬೆಳಗ್ಗೆ ಮತ್ತು ಸಂಜೆ ಕೆಲ ಹೊತ್ತು ವಾಹನ ಸವಾರರಿಗೆ ಬಿಸಿ ಮುಟ್ಟಿಸುವುದನ್ನು ನಿಲ್ಲಿಸಿಲ್ಲ. ಹೆಲ್ಮೆಟ್ ಇಲ್ಲದೇ ಬೈಕ್ ಸವಾರಿ ಮಾಡುವವರಿಗೆ, ಮಾಸ್ಕ್ ಧರಿಸದವರಿಗೆ ದಂಡ ವಿಧಿಸುತ್ತಿದ್ದಾರೆ. ಕರೊನಾ ಮುನ್ನೆಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ತಿಳಿ ಹೇಳುತ್ತಿದ್ದಾರೆ.