ಲಕ್ಷ್ಮಿಯಿಂದ ಸಂಪತ್ತು ಕ್ರೋಧದಿಂದ ಆಪತ್ತು: ರಾಘವೇಶ್ವರ ಶ್ರೀ

IMG-20220805-WA0044.jpg
Published on


ಕಾರವಾರ: ಲಕ್ಷ್ಮಿಯಿಂದ ಸಂಪತ್ತು, ಕ್ರೋಧದಿಂದ ಆಪತ್ತು. ಲಕ್ಷ್ಮಿಯನ್ನು ಗೆಲ್ಲಬೇಕಿದ್ದರೆ ನಾವು ಕ್ರೋಧವನ್ನು ಗೆಲ್ಲಬೇಕು. ಸಿಟ್ಟು, ಕ್ರೋಧ, ಹಿಂಸೆಯನ್ನು ಬಿಟ್ಟು, ಸಂತೋಷ ಪಟ್ಟು, ಸಂತೋಷ ಕೊಟ್ಟು ಬಾಳ್ವೆ ನಡೆಸೋಣ ಎಂದು ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ಕರೆ ನೀಡಿದರು.
ಗೋಕರ್ಣ ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಶುಕ್ರವಾರನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.

ಕ್ರೋಧ ಮತ್ತು ಹಿಂಸೆ ಅಕ್ಕ- ತಂಗಿ ಇದ್ದಂತೆ. ಇದು ಪಾಪಸಂಬಂಧ. ನೀತಿಬಾಹಿರ ಸಂಬಂಧ. ಲಕ್ಷ್ಮಿ ಎಂದರೆ ಸಮೃದ್ಧಿ. ಕ್ರೋಧದಿಂದ ಸಂಪತ್ತು ನಾಶವಾಗುತ್ತದೆ. ವರಮಹಾಲಕ್ಷ್ಮಿ ಹಬ್ಬದ ಶುಭ ಸಂದರ್ಭದಲ್ಲಿ ಕ್ರೋಧ- ಸಿಟ್ಟನ್ನು ತ್ಯಜಿಸುವ ಸಂಕಲ್ಪ ಮಾಡೋಣ ಎಂದರು.
ಕ್ರೋಧದಿಂದ ಒಳಿತು ಕೆಡುಕುಗಳ ವಿವೇಚನೆ ಕಳೆದು ಹೋಗುತ್ತದೆ. ಇದರಿಂದ ನಮ್ಮ ಸ್ಮೃತಿಯೇ ನಾಶವಾಗುತ್ತದೆ. ನಮ್ಮ ಜೀವನಾನುಭವ, ತಿಳಿವಳಿಕೆಯೇ ಇಲ್ಲವಾಗುತ್ತದೆ. ನೆನಪು ನಾಶವಾಗುತ್ತಿದ್ದಂತೆ ಬುದ್ಧಿನಾಶವಾಗುತ್ತದೆ. ಸಿಟ್ಟು ನಮ್ಮ ಸರ್ವನಾಶದಲ್ಲಿ ಪರ್ಯವಸಾನಗವಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೆ ಜೀವನದಲ್ಲಿ ಸಿಟ್ಟಿಗೆ ಅವಕಾಶ ನೀಡಬಾರದು ಎಂದು ಕಿವಿಮಾತು ಹೇಳಿದರು.
ನಿವೃತ್ತ ಡಿವೈಎಸ್ಪಿ ಪ್ರಮೋದ್ ರಾವ್, ಉದ್ಯಮಿ ಆನಂದ್ ಕೌರಿ ಅವರು ಶ್ರೀಗಳಿಂದ ಆಶೀರ್ವಾದ ಪಡೆದರು. ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಗುರುಕುಲದ ವಿದ್ಯಾರ್ಥಿನಿಯರಿಂದ ವಿಶೇಷ ಕಾರ್ಯಕ್ರಮಗಳು, ಸಂಗೀತ ಸೇವೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net