

ಅರಕೇರಾ: ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಿದರೆ ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ ಎಂದು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗುರುನಾಥ ಹೇಳಿದರು.
ಪಟ್ಟಣದ ಶ್ರೀ ಸಿದ್ದಯ್ಯ ಹವಾಲ್ದಾರ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆರೋಗ್ಯ ಇಲಾಖೆಯಿಂದ ಗುರುವಾರ ಆಯೋಜಿಸಿದ್ದ ಮಲೇರಿಯಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚು ಹರಡುತ್ತವೆ. ಇವುಗಳ ನಿಯಂತ್ರಣಕ್ಕೆ ಸಮುದಾಯದ ಸಹಕಾರ ಅಗತ್ಯ. ಅನಾಫಿಲಿಸ್ ಸೊಳ್ಳೆಗಳು ಕಚ್ಚುವುದರಿಂದ ಮಲೇರಿಯಾ ರೋಗಕ್ಕೆ ತುತ್ತಾಗಬೇಕಾಗುತ್ತದೆ. ಹಾಗಾಗಿ ಜನರು ಸುತ್ತಲಿನ ಪರಿಸರ ಮತ್ತು ವೈಯಕ್ತಿಕ ಸ್ವಚ್ಛತೆಗೆ ಹೆಚ್ಚು ಕಾಳಜಿ ವಹಿಸಬೇಕು. ನೀರು ನಿಲ್ಲದಂತೆ ತಡೆಯುವುದು ಹಾಗೂ ಸೊಳ್ಳೆ ಉತ್ಪತ್ತಿ ತಾಣಗಳಲ್ಲಿ ಕೀಟ ನಾಶಕಗಳನ್ನು ಸಿಂಪಡಿಸಬೇಕು ಎಂದು ತಿಳಿಸಿದರು.