

ಭಟ್ಕಳ: ಮುಂದಿನ ದಿನಗಳಲ್ಲಿ ಕರೊನಾ ಆರ್ಭಟ ಇನ್ನಷ್ಟು ಹೆಚ್ಚಿ ಜನರನ್ನು ಭಾದಿಸುವ ಶಂಕೆ ಇದ್ದು, ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ. ಆಡಳಿತದೊಂದಿಗೆ ಜನತೆಯೂ ಸಹಕರಿಸುವ ಮೂಲಕ ಹೆಮ್ಮಾರಿ ಮಣಿಸಲು ಯುದ್ಧಕ್ಕೆ ನಿಲ್ಲಬೇಕಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.
ಪಟ್ಟಣದಲ್ಲಿ ಶನಿವಾರ ಜರುಗಿದ ಅಧಿಕಾರಿಗಳು, ಸ್ಥಳೀಯ ಮುಖಂಡರ ಜೊತೆ ಸರಣಿ ಸಭೆ ನಡೆಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಸದ್ಯದ ಪರಿಸ್ಥಿತಿ ಉತ್ತಮವಾಗಿದೆ. ಆದರೂ ಮುಂದೆ ಕರೊನಾ ಹೇಗೆ ಅಪ್ಪಳಿಸಲಿದೆ ಎನ್ನುವುದು ತಿಳಿದಿಲ್ಲ. ಯಾವುದೆ ಪರಿಸ್ಥಿತಿ ಎದುರಿಸಲು, ಜಿಲ್ಲಾಡಳಿತ, ತಾಲೂಕಾಡಳಿತ ಸನ್ನದ್ಧವಾಗಿದೆ. ಔಷಧ ವಿತರಣೆ, ಆಮ್ಲಜನಕ ಪೂರೈಕೆ ಅಥವಾ ಯಾವುದೆ ಮೂಲ ಅವಶ್ಯಕತೆಗಳಿಗೆ ಕೊರತೆಯಾಗದಂತೆ ಈಗಾಗಲೆ ಹಿರಿಯ ಅಧಿಕಾರಿಗಳೊಡನೆ ಚರ್ಚೆ ನಡೆಸಲಾಗಿದೆ ಎಂದರು.
ಕುಮಟಾ, ಹೊನ್ನಾವರ, ಭಟ್ಕಳದ ಬಹುತೇಕ ಮಂದಿ ವೈದ್ಯಕೀಯ ಸೌಲಭ್ಯಕ್ಕಾಗಿ ಪಕ್ಕದ ಜಿಲ್ಲೆಯನ್ನು ಆಶ್ರಯಿಸಿದ್ದಾರೆ. ಆದರೆ, ಪರಿಸ್ಥಿತಿ ಈಗ ಮುಂಚಿನ ಹಾಗೆ ಇಲ್ಲ. ಅನಗತ್ಯ ತಿರುಗಾಟ, ಪರಸ್ಪರ ಅಂತರ ಕಾಪಾಡಲು ಸಾರ್ವಜನಿಕರು ಮುಂದೆ ಬರಬೇಕು ಎಂದರು.
ಎಸ್ಪಿ ಶಿವಪ್ರಕಾಶ ಮಾತನಾಡಿ, ಸರ್ಕಾರ ಹೊಸ ಲಾಕ್ಡೌನ್ ನಿಯಮಗಳನ್ನು ಘೊಷಿಸಿದೆ. ಕೆಲ ನಿಯಮಗಳನ್ನು ಬಿಗಿಯಾಗಿಸಿದೆ. ಸಾರ್ವಜನಿಕರು ಸರ್ಕಾರದ ನಿಯಮಗಳನ್ನು ಪಾಲಿಸಿದರೆ ಸದ್ಯದಲ್ಲೆ ಲಾಕ್ ಡೌನ್ ಅಂತ್ಯಗೊಳ್ಳಲಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ದಿನಗಳು ಬರಬಹುದು. ಹೀಗಾಗಿ ಕಟ್ಟುನಿಟ್ಟಾಗಿ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದರು. ಭಟ್ಕಳ ಉಪವಿಭಾಗಾಧಿಕಾರಿ ಮಮತಾದೇವಿ ಎಸ್., ಡಿವೈಎಸ್ಪಿ ಬೆಳ್ಳಿಯಪ್ಪ, ತಹಸೀಲ್ದಾರ್ ರವಿಚಂದ್ರ ಎಸ್., ಸಿಪಿಐ ದಿವಾಕರ ಎಂ., ಟಿಎಚ್ಒ ಬಾಲಕೃಷ್ಣ ಮೇಸ್ತ ಹಾಗೂ ಇತರ ಅಧಿಕಾರಿಗಳು ಇದ್ದರು.
ತಾಲೂಕಾಸ್ಪತ್ರೆ ಪರಿಶೀಲನೆ
ಭಟ್ಕಳ: ಕೋವಿಡ್ ರೋಗಿಗಳ ಜೊತೆಗೆ ನಾನ್ ಕೋವಿಡ್ ರೋಗಿಗಳು ಆಸ್ಪತ್ರೆಗೆ ಬಂದರೆ ಯಾವ ಕ್ರಮ ಕೈಗೊಂಡಿದ್ದಿರಿ, ಪೂರಕ ವ್ಯವಸ್ಥೆ ಹೇಗೆ ಮಾಡಿದ್ದಿರಿ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಾಲೂಕಾಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಅವರನ್ನು ಪ್ರಶ್ನಿಸಿದರು. ಶನಿವಾರ ತಾಲೂಕಾಸ್ಪತ್ರೆಗೆ ಭೇಟಿ ನೀಡಿದ ಅವರು, ಅಲ್ಲಿನ ವ್ಯವಸ್ಥೆಗಳ ಪರಿಶೀಲನೆ ನಡೆಸಿ ಮಾತನಾಡಿದರು. ಆಸ್ಪತ್ರೆಯನ್ನು ಸುತ್ತು ಹೊಡೆದ ಅವರು ಕೆಲ ಬದಲಾವಣೆ ಮಾಡುವಂತೆ ಸೂಚಿಸಿದರು. ಮೇಲ್ ವಾರ್ಡ್ ಅನ್ನು ಸಂಪೂರ್ಣ ಬಂದ್ ಮಾಡಿ ಅದನ್ನು ಕೋವಿಡ್ ವಾರ್ಡ್ ಆಗಿ ಪರಿವರ್ತಿಸಬೇಕು ಂದು ಸೂಚಿಸಿದ ಅವರು, ಆಸ್ಪತ್ರೆಯ ಸ್ಥಿತಿಗತಿ ವಿಚಾರಿಸಿದರು. ಎಸ್ಪಿ ಶಿವಪ್ರಕಾಶ ದೇವರಾಜು, ತಾಪಂ ಇಒ ಪ್ರಭಾಕರ ಚಿಕ್ಕನಮನೆ, ಪುರಸಭೆ ಮುಖ್ಯಾಧಿಕಾರಿ ಟಿ. ದೇವರಾಜು, ಜಾಲಿ ಪ.ಪಂ ಮುಖ್ಯಾಧಿಕಾರಿ ಅಜೆಯ ಭಂಡಾರಕರ, ಪಿಎಸ್ಐ ಸುಮಾ ಆಚಾರ್ಯ, ಪಿಎಸ್ಐ ಎಚ್ ಕುಡಗಂಟಿ ಇತರರಿದ್ದರು.]
ಬೈಕ್ ಸೀಜ್ ಮಾಡಿದ ಪೊಲೀಸರು
ಮುಂಡಗೋಡ: ನಿಯಮ ಉಲ್ಲಂಘಿಸಿ ಪಟ್ಟಣದಲ್ಲಿ ಓಡಾಡುತ್ತಿದ್ದ ಬೈಕ್ ಮತ್ತು ವಾಹನಗಳನ್ನು ಪೊಲೀಸರು ಶುಕ್ರವಾರ ಸೀಜ್ ಮಾಡಿ ದಂಡ ವಿಧಿಸಿದರು. ಅನಗತ್ಯವಾಗಿ ಓಡಾಡುತ್ತಿದ್ದ ಬೈಕ್ ಸವಾರರಿಗೆ ಮತ್ತು ವಾಹನ ಚಾಲಕರಿಗೆ ಎಚ್ಚರಿಕೆ ನೀಡುತ್ತಿದ್ದ ಇಲ್ಲಿನ ಸಿಪಿಐ ಪ್ರಭುಗೌಡ ಡಿ.ಕೆ. ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಪಟ್ಟಣದಲ್ಲಿ ಅನವಶ್ಯಕವಾಗಿ ತಿರುಗಾಡುತ್ತಿದ್ದ ಸವಾರರಿಗೆ ಪೋಲಿಸರ ಲಾಠಿ ಏಟು ಸಾಮಾನ್ಯವಾಗಿತ್ತು. ಹೆಲ್ಮೆಟ್ ಧರಿಸದೆ, ಮಾಸ್ಕ್ ಧರಿಸದೆ ಅನವಶ್ಯಕವಾಗಿ ತಿರುಗಾಡುತ್ತಿದ್ದ ಸವಾರರ 40 ಬೈಕ್ಗಳನ್ನು ಹಾಗೂ 4 ವಾಹನಗಳನ್ನು ಸೀಜ್ ಮಾಡಿ ಒಟ್ಟು 22 ಸಾವಿರ ರೂಪಾಯಿ ದಂಡ ವಿಧಿಸಿ ಎಚ್ಚರಿಕೆ ನೀಡಿದರು.
ಜನಜಂಗುಳಿಯಲ್ಲಿ ಸಿಲುಕಿಕೊಂಡ ಎಸಿ
ಭಟ್ಕಳ: ತಾಲೂಕಾಡಳಿತ, ಪೊಲೀಸ್ ಇಲಾಖೆ ಸಾಕಷ್ಟು ಬಾರಿ ವಿನಂತಿಸಿದ್ದರೂ ಮಾರುಕಟ್ಟೆಯಲ್ಲಿ ಜನಸಂದಣಿ ಮಾತ್ರ ಕಡಿಮೆ ಆಗುತ್ತಿಲ್ಲ. ಇದನ್ನು ಪರಿಶೀಲಿಸಲು ಆಗಮಿಸಿದ ಉಪವಿಭಾಗಾಧಿಕಾರಿಗಳ ವಾಹನವೇ ಜನಸಂದಣಿಯಲ್ಲಿ ಸಿಕ್ಕು ಹೊರಬರಲು ಹರಸಾಹಸ ಪಟ್ಟ ಘಟನೆ ಶನಿವಾರ ಬೆಳಗ್ಗೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದಲ್ಲಿ ದಿನೇದಿನೆ ಜನಸಂದಣಿ ಹೆಚ್ಚಾಗುತ್ತಿದೆ. ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗಿನ ಸ್ಥಿತಿ ನೋಡಿದರೆ ಜಾತ್ರೆ ನಡೆಯುವಂತೆ ಭಾಸವಾಗುತ್ತಿದೆ. ಈ ಹಿನ್ನಲೆಯಲ್ಲಿ ಶುಕ್ರವಾರ ಭಟ್ಕಳ ಶಾಸಕರು ಅಧಿಕಾರಿಗಳ ಸಭೆ ನಡೆಸಿ ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದರು. ಪರಿಸ್ಥಿತಿ ನಿಭಾಯಿಸಲು ಶನಿವಾರ ಬೆಳಗ್ಗೆ ಉಪವಿಭಾಗಾಧಿಕಾರಿ ಮಮತಾದೇವಿ ಎಸ್. ಅವರೇ ಫೀಲ್ಡಿಗಿಳಿದಿದ್ದರು. ಆದರೆ, ನೆರೆದಿದ್ದ ಜನಸಂದಣಿಯಲ್ಲಿ ಸ್ವತಃ ಅವರ ವಾಹನ ಹೊರತರಲು ಹರಸಾಹಸ ಪಡುವಂತಾಯಿತು. ನಂತರ ಪೊಲೀಸ್ ಇಲಾಖೆಯ ಸಿಬ್ಬಂದಿ ಬಂದು ಸಂಚಾರ ಸುಗಮಗೊಳಿಸಿದರು. ಪರಸ್ಪರ ಅಂತರ ಮರೆತ ಜನ ಕೋವಿಡ್ 10ರ ವರೆಗೆ ಬರುವುದೆ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದರು. ಇದರಿಂದ ಆಕ್ರೋಶಗೊಂಡ ಎಸಿ ಮೇಡಂ ಜನದಟ್ಟಣೆ ಕಡಿಮೆ ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ವೇಳೆ ನಗರಠಾಣೆ ಎಎಸ್ಐ ರವಿ ನಾಯ್ಕ, ಗೋಪಾಲ ನಾಯಕ ಸೇರಿ ಇತರ ಸಿಬ್ಬಂದಿ ಇದ್ದರು.
ಕುಂಟು ನೆಪ ಹೇಳುತ್ತಿದ್ದವರಿಗೆ ಪಾಠ
ಹೊನ್ನಾವರ: ತಾಲೂಕಿನಲ್ಲಿ ಕರೊನಾ ವ್ಯಾಪಕವಾಗಿ ಹರಡುತ್ತಿದ್ದರೂ ಜನರು ಮನಬಂದಂತೆ ತಿರುಗಾಡುತ್ತಿದ್ದಾರೆ. ಕರ್ಫ್ಯೂವನ್ನು ಮೀರಿ ಎಲ್ಲೆಂದರಲ್ಲಿ ಓಡಾಡುತ್ತಿರುವ ಬೈಕ್ ಸವಾರರಿಗೆ ಶನಿವಾರ ಹೊನ್ನಾವರ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 10ರ ವರೆಗೆ ಅವಕಾಶ ನೀಡಲಾಗಿದೆ. ಆದರೂ ಜನರು ಈ ಅವಧಿ ಮೀರಿ ಪಟ್ಟಣದಲ್ಲಿ ಓಡಾಡುತ್ತಿದ್ದರು. ಪೊಲೀಸರು ಸೈರನ್ ಮೂಲಕ ಸೂಚನೆ ನೀಡದರೂ ಅದನ್ನು ಲೆಕ್ಕಿಸದೇ ಓಡಾಟ ಮುಂದುವರಿಸಿದ್ದರು. ಅಲ್ಲಲ್ಲಿ ಪೊಲೀಸರು ವಾಹನ ತಡೆದರೆ ಕುಂಟು ನೆಪ ಹೇಳಿ ಅವರಿಂದ ತಪ್ಪಿಸಿಕೊಳ್ಳುತ್ತಿದ್ದರು. ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿದ ಇಂತವರ ವಿರುದ್ಧಹೊನ್ನಾವರ ಮತ್ತು ಮಂಕಿ ಠಾಣೆಯ ಪೊಲೀಸರು ಬಿಗಿ ಕ್ರಮ ಕೈಗೊಂಡಿದ್ದಾರೆ. ಶನಿವಾರ ಬೇಕಾಬಿಟ್ಟಿ ಓಡಾಟ ನಡೆಸುತ್ತಿದ್ದ ನೂರಕ್ಕೂ ಅಧಿಕ ಬೈಕ್ಗಳನ್ನು ತಡೆದು ಪಟ್ಟಣದ ಪೊಲೀಸ್ ಮೈದಾನದಲ್ಲಿ ಕೆಲವು ಸಮಯದವರೆಗೆ ಸಾಲಾಗಿ ನಿಲ್ಲಿಸಿ ಪೊಲೀಸರು ಕರೊನಾ ಮಾರ್ಗಸೂಚಿಯ ಪಾಠ ಹೇಳಿದರು.
ಸಿಪಿಐ ಶ್ರೀಧರ ಮಾತನಾಡಿ, ಕರೊನಾ ಹರಡುತ್ತಿದ್ದು, ಜೀವಕ್ಕೆ ಅಪಾಯ ಕಾದಿದೆ. ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಕುಂಟು ನೆಪ ಹೇಳಿ ನುಣುಚಿಕೊಳ್ಳದೇ ನಿಮ್ಮ ಮತ್ತು ನಿಮ್ಮ ಕುಟುಂಬದ ರಕ್ಷಣೆಗೆ ಕಾಳಜಿ ವಹಿಸಬೇಕು. ಮುಂದೆ ಇದೇ ರೀತಿ ಮುಂದುವರಿದರೆ ವಾಹನಗಳನ್ನು ಸೀಜ್ ಮಾಡಿ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿ ಕಳಿಸಿದ್ದಾರೆ.
ಮುಂಡಗೋಡ ಪಟ್ಟಣದಲ್ಲಿ ಔಷಧ ಸಿಂಪಡಣೆ
ಮುಂಡಗೋಡ: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬೀದಿಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಹಾಗೂ ಕೋವಿಡ್ ನಿಯಂತ್ರಣದ ಮುಂಜಾಗ್ರತೆ ಕ್ರಮವಾಗಿ ಪೌರ ಕಾರ್ವಿುಕರು ಗುರುವಾರ ಔಷಧ ಸಿಂಪಡಣೆ ಮಾಡಿದರು.
ಕರೊನಾ 2ನೇ ಅಲೆಯ ಹರಡುವಿಕೆ ತಡೆಗಟ್ಟಲು ಮತ್ತು ಮಳೆಗಾಲದ ಆರಂಭ ಸಮಯವಾಗಿದ್ದರಿಂದ ಪಟ್ಟಣದ ಎಲ್ಲ ವಾರ್ಡ್ಗಳ ಚರಂಡಿಗಳನ್ನು ಸ್ವಚ್ಛಗೊಳಿಸಿದರು. ಕೊಳಚೆ ನೀರು ನಿಲ್ಲದಂತೆ ಕಸ, ತ್ಯಾಜ್ಯ ತೆಗೆದು ಸೊಳ್ಳೆ ಮತ್ತು ಕ್ರಿಮಿ-ಕೀಟಗಳಿಂದ ಸಾಂಕ್ರಾಮಿಕ ಕಾಯಿಲೆಗಳು ಹರಡದಂತೆ ಮುಂಜಾಗ್ರತೆ ಕ್ರಮವಾಗಿ ವಾರ್ಡ್ಗಳಲ್ಲಿ ಔಷಧ ಮತ್ತು ಸೋಡಿಯಂ ಹೈಪೋಕ್ಲೋರೈಡ್ ಸಿಂಪಡಣೆ ಮಾಡಲಾಯಿತು ಎಂದು ಪಪಂ ಮುಖ್ಯಾಧಿಕಾರಿ ಸಂಗನಬಸಯ್ಯ ತಿಳಿಸಿದರು.