ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬಕ್ಕೆ ಸಂಸದ ಅಸಮಾಧಾನ

1001270717
filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0;
Published on

ಹೊಳೆನರಸೀಪುರ: ತಾಲೂಕಿನ ಹಂಗರಹಳ್ಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬಕ್ಕೆ ಸಂಸದ ಶ್ರೇಯಸ್ ಪಟೇಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಹಂಗರಹಳ್ಳಿಯ ರೈಲ್ವೆ ಮೇಲ್ಸೇತುವೆ ಕಾಮಗಾರಿ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗುತ್ತಿಗೆದಾರ ಹಾಗೂ ರೈಲ್ವೆ ಅಧಿಕಾರಿಗಳ ತಂಡವನ್ನು ಸ್ಥಳಕ್ಕೆ ಕರೆಸಿಕೊಂಡು ಸೇತುವೆಯ ನೀಲಿನಕ್ಷೆ ಪರಿಶೀಲಿಸಿ ಮಾಹಿತಿ ಪಡೆದುಕೊಂಡರು. ಸೇತುವೆಯ ಸಂಪೂರ್ಣ ಕಾಮಗಾರಿ ವೀಕ್ಷಣೆ ಮಾಡಿದ ನಂತರ ಕಾಮಗಾರಿಯ ವಿಳಂಬಕ್ಕೆ ಕಾರಣರಾದ ಎಂ.ವಿ.ಕನ್‌ಸ್ಟ್ರಕ್ಷನ್ ಮಾಲೀಕ ವೆಂಕಟೇಶ್ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು.

ಈ ವರ್ಷದ ಡಿಸೆಂಬರ್ ತಿಂಗಳಿನೊಳಗೆ ಸಂಪೂರ್ಣ ಕಾಮಗಾರಿಯನ್ನು ಮುಗಿಸಿ ಸುಗಮ ಸಂಚಾರಕ್ಕೆ ಬಿಟ್ಟುಕೊಡಬೇಕು ಎಂದು ಡೆಡ್‌ಲೈನ್ ವಿಧಿಸಿದರು. ಇಲ್ಲಸಲ್ಲದ ಕಾರಣ ನೀಡಿ ವಿಳಂಬ ಮಾಡಿದರೆ ಸ್ಥಳದಲ್ಲೇ ಕುಳಿತು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದ ಅವರು, ನಿಗದಿತ ಅವಧಿಯೊಳಗೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಕ್ರಮಕ್ಕೆ ಮುಂದಾಗ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕೆಲಸಗಾರರ ಕೊರತೆಯಿಂದ ಕಾಮಗಾರಿ ವಿಳಂಬವಾಗಿದೆ ಎಂಬ ಕಾರಣ ನೀಡಿದ ಗುತ್ತಿಗೆದಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಅಧಿಕಾರಿಗಳಿಗೂ ಎಚ್ಚರಿಕೆ ನೀಡಿದರು.

ಕುಸಿದು ಬಿದ್ದ ಸೇತುವೆಯ ಮರು ನಿರ್ಮಾಣಕ್ಕೆ 2023ರಲ್ಲಿ ಚಾಲನೆ ನೀಡಿ ಎರಡು ವರ್ಷ ಕಳೆಯುತ್ತಿದ್ದರೂ ಕಾಮಗಾರಿ ಗುಣಮಟ್ಟದಿಂದ ಕ್ಷಿಪ್ರಗತಿಯಲ್ಲಿ ನಡೆಯುತ್ತಿಲ್ಲ ಎಂಬ ದೂರು ಸಾರ್ವಜನಿಕರಿಂದ ವ್ಯಾಪಕವಾಗಿ ಕೇಳಿಬರುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ರೀತಿ ಮಂದಗತಿಯಲ್ಲಿ ಕಾಮಗಾರಿ ನಡೆಸಿದರೆ ನಿತ್ಯ ಸಂಚರಿಸುವ ಪ್ರಯಾಣಿಕರಿಗೆ ಅನನುಕೂಲವಾಗುತ್ತದೆ. ನಿಮ್ಮ ಬೇಜವಾಬ್ದಾರಿ ಕೆಲಸ ನಿರ್ವಹಣೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಅಸಮಾಧಾನ ಹೊರಹಾಕಿದರು.

ಮೈಸೂರು ವಿಭಾಗೀಯ ಅಸಿಸ್ಟೆಂಟ್ ಇಂಜಿನಿಯರ್ ಬಶೀರ್ ಹಾಗೂ ಎಕ್ಸಿಕ್ಯೂಟಿವ್ ಇಂಜಿನಿಯರ್ ವಿನೋದ್ ಹಾಗೂ ಗುತ್ತಿಗೆದಾರ ವೆಂಕಟೇಶ್ ಅವರನ್ನು ಸಂಸದರು ತರಾಟೆಗೆ ತೆಗೆದುಕೊಂಡರು. ಮುಂದೆ ಇದೇ ಬೆಳವಣಿಗೆ ಮುಂದುವರಿಯದಂತೆ ಸೂಚಿಸಿದರು.

ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಲಾಗುತ್ತಿರುವ ಸೇತುವೆ ಶೀಘ್ರವಾಗಿ ಸಾರ್ವಜನಿಕ ಉಪಯೋಗಕ್ಕೆ ಬಳಕೆಯಾಗಬೇಕು. ಕೇಂದ್ರ ಸರ್ಕಾರದ ಅರ್ಧಭಾಗ ಅನುದಾನ ರಾಜ್ಯ ಸರ್ಕಾರದ ಅರ್ಧಭಾಗ ಅನುದಾನದ ನೆರವಿನಿಂದ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ಹಂಗರಹಳ್ಳಿ ರೈಲ್ವೆ ಮೇಲ್ಸೇತುವೆಯನ್ನು 2017ರಲ್ಲಿ 34 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಕಳಪೆ ಕಾಮಗಾರಿಯ ಪರಿಣಾಮದಿಂದ ಕುಸಿದು ಬಿದ್ದು ಸಂಚಾರಕ್ಕೆ ತೊಡಕಾಗಿತ್ತು. ಸಾರ್ವಜನಿಕರ ಒತ್ತಾಯದಿಂದ ದುರಸ್ತಿ ಮಾಡದೆ ಮರುಸೇತುವೆ ನಿರ್ಮಿಸಲು 9.65 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸೇತುವೆಯ 240 ಮೀಟರ್ ಉದ್ದವನ್ನು ತೆರವುಗೊಳಿಸಿ ಮರುನಿರ್ಮಿಸಲಾಗುತ್ತಿದೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಬೇಕಾಬಿಟ್ಟಿ ಆಟವಾಡುವಂತಿದೆ. ಮಳೆಗಾಲ ಪ್ರಾರಂಭವಾದರೆ ಕಾಮಗಾರಿಗೆ ಹಿನ್ನಡೆಯಾಗುತ್ತದೆ. ಬೇಸಿಗೆ ಸಮಯದಲ್ಲಿ ಕಾಮಗಾರಿ ಸ್ಥಗಿತಗೊಳಿಸಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net