

ಬಾಗಲಕೋಟೆ: ಜಿಲ್ಲೆಯ ಎಲ್ಲ 9 ತಾಲ್ಲೂಕುಗಳನ್ನು ತೀವ್ರ ಬರಪೀಡಿತ ತಾಲ್ಲೂಕುಗಳೆಂದು ಕರ್ನಾಟಕ ರಾಜ್ಯ ಸರ್ಕಾರವು ಘೋಷಿಸಿರುವ ಹಿನ್ನೆಲೆಯಲ್ಲಿ ರೈತರಿಗೆ ಬೆಳೆ ನಷ್ಟ ಪರಿಹಾರ ಹಾಗೂ ಇನ್ಪುಟ್ ಸಬ್ಸಿಡಿಯನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿಯಾಗಿರುವ ಜಮೀನಿನ ವಿಸ್ತೀರ್ಣದ ಆಧಾರದ ಮೇಲೆ ಮತ್ತು ಬೆಳೆ ಸಮೀಕ್ಷೆ ಆಧಾರದ ಮೇಲೆ ಬೆಳೆ ನಷ್ಟ ಪರಿಹಾರವನ್ನು ವಿತರಿಸಲಾಗುವ ಪ್ರಯುಕ್ತ ರೈತರು ತಾವು ಹೊಂದಿರುವ ಎಲ್ಲಾ ಸರ್ವೇ ನಂಬರಗಳ ಸಾಗುವಳಿ ವಿಸ್ತೀರ್ಣವನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸುವುದು ಕಡ್ಡಾಯವಾಗಿದೆ ಡಿಸಿ ಜಾನಕಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ಬೆಳೆ ನಷ್ಟ ಪರಿಹಾರವನ್ನು ನೇರ ನಗದು ವರ್ಗಾವಣೆ (ಡಿ.ಬಿ.ಟಿ.) ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತದೆ. ರೈತರು ತಮ್ಮ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಗಳಿಗೆ ಬ್ಯಾಂಕ್‍ಗಳಲ್ಲಿ ಆಧಾರ್ ಜೋಡಣೆಯೊಂದಿಗೆ ಎನ್.ಪಿ.ಸಿ.ಐ ಮ್ಯಾಪಿಂಗ್ ಮಾಡಿಸುವುದು ಕೂಡಾ ಅತ್ಯವಶ್ಯವಾಗಿದೆ. ಪ್ರಸ್ತುತ ಜಿಲ್ಲೆಯ ಒಟ್ಟು 5,39,621 ರೈತರ ತಾಕುಗಳ ಪೈಕಿ 4,33,851 ರೈತರ ತಾಕುಗಳ ನೋಂದಣಿ ಕಾರ್ಯ ಪೂರ್ಣಗೊಂಡಿದ್ದು, ಇನ್ನೂ 1,05,770 ಭೂ-ಹಿಡುವಳಿಗಳ ನೋಂದಣಿ ಕಾರ್ಯ ಫ್ರೂಟ್ಸ್ ತಂತ್ರಾಂಶದಲ್ಲಿ ಬಾಕಿ ಇರುತ್ತದೆ.
ಬಾಗಲಕೋಟೆ ಜಿಲ್ಲೆಯು ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ಜಮೀನಿನ ವಿವರಗಳನ್ನು ದಾಖಲಿಸುವಲ್ಲಿ (ಶೇ. 80.40) ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ರೈತರು ಬೆಂಬಲ ಬೆಲೆ ಯೋಜನೆಗಾಗಿ, ಬ್ಯಾಂಕ್‍ನಿಂದ ಬೆಳೆ ಸಾಲ ಪಡೆಯಲು, ಬೆಳೆ ವಿಮೆ ಪರಿಹಾರ ಪಡೆಯಲು, ಬೆಳೆ ಸಮೀಕ್ಷೆ ಮಾಹಿತಿಗಾಗಿ, ಬೆಳೆ ಹಾನಿ ಪರಿಹಾರಕ್ಕಾಗಿ, ಕೃಷಿ ಪರಿಕರ ಮತ್ತು ಸಹಾಯಧನ ಸೌಲಭ್ಯ ಪಡೆಯಲು ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ಎಲ್ಲಾ ಭೂ-ಹಿಡುವಳಿಗಳ ಪಹಣಿ ಜೋಡಣೆ ಮಾಡುವುದು ಅತ್ಯವಶ್ಯಕವಾಗಿದೆ.
ರೈತರು, ಬೇರೆ ಕಡೆ ನೆಲೆಸಿರುವ ಜಮೀನು ಮಾಲೀಕರು, ಹೊಸದಾಗಿ ಭೂಮಿ ಖರೀದಿ ಮಾಡಿರುವ ರೈತರು ಮತ್ತು ಇತ್ತೀಚಿಗೆ ವಾರ್ಸಾ ಹೊಂದಿರುವ ರೈತರು, ಜಮೀನು ದಾಖಲೆಗಳೊಂದಿಗೆ ಆಧಾರ್ ಕಾರ್ಡ, ಜಾತಿ ದೃಢೀಕರಣ ಪತ್ರ, ಪೋಟೋ, ಬ್ಯಾಂಕ್ ಪಾಸ್ ಬುಕ್ ಮತ್ತು ಜಮೀನಿನ ಪಹಣಿ ಪತ್ರಿಕೆ ಇತ್ಯಾದಿ ವಿವರಗಳೊಂದಿಗೆ ಹತ್ತಿರದ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳು, ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಪಶು ಸಂಗೋಪನೆ ಇಲಾಖೆ ಮತ್ತು ಸಹಾಯಕ ಕೃಷಿ ನಿರ್ದೇಶಕರ ಕಛೇರಿಗಳಲ್ಲಿ ಅರ್ಜಿ ಸಲ್ಲಿಸಿ ರೈತರ ನೋಂದಣಿ ಸಂಖ್ಯೆಯನ್ನು ಪಡೆದುಕೊಳ್ಳಲು ಹಾಗೂ ಈಗಾಗಲೇ ಎಫ್‍ಐಡಿ ಹೊಂದಿದÀ ರೈತರು ತಮ್ಮ ಎಲ್ಲಾ ಭೂ-ಹಿಡುವಳಿಗಳ ಮಾಹಿತಿಯನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳಲು ರೈತಭಾಂದವರಲ್ಲಿ ಜಿಲ್ಲಾಧಿಕಾರಿಗಳು ಕೋರಿದ್ದಾರೆ.